ರಾಜ್ಯ

ಕರ್ನಾಟಕ ಬಜೆಟ್ 2023: 'ಇದೊಂದು ಕೆಟ್ಟ ಯೋಜನೆ'; ಮೇಕೆದಾಟು ಯೋಜನೆಗೆ ನಟ ಚೇತನ್ ವಿರೋಧ

Srinivasamurthy VN

ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದೇಶಿದ ಮೇಕೆದಾಟು ಯೋಜನೆಗೆ ನಟ-ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಕೆಟ್ಟ ಯೋಜನೆ ಎಂದು ಟೀಕಿಸಿದ್ದಾರೆ.

ಕರ್ನಾಟಕದ ಕುಡಿಯುವ ನೀರಿನ ಕೊರತೆ ನೀಗಿಸುವ ಉದ್ದೇಶದಿಂದ ಉದ್ದೇಶಿಸಲಾಗಿರುವ ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ದಶಕಗಳಿಂದ ಹರಸಾಹಸ ಪಡುತ್ತಿದ್ದು, ಯೋಜನೆಯಿಂದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಕುಡಿಯುವ ನೀರಿನ ಕಲ್ಪಿಸಲು ಅನುಕೂಲ ಆಗಲಿದೆ.

ಆದರೆ, ಈ ಯೋಜನೆಗೆ ತಮಿಳುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿವೆ. ಈ ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿದ್ದರೂ, ಡಿಸಿಎಂ ಡಿಕೆಶಿ ಶಿವಕುಮಾರ್ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮೇಕೆದಾಟು' ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಇಂದಿನ (ಜುಲೈ 7) ಬಜೆಟ್‌ನಲ್ಲೂ ಸಿದ್ದರಾಮಯ್ಯ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿದೆ. 

ಇದರ ನಡುವೆಯೇ ಇಂದಿನ ರಾಜ್ಯ ಬಜೆಟ್ ನಲ್ಲಿ ಮೇಕೆದಾಟು ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದು, ಇದಕ್ಕೆ ನಟ ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ. ಆ ದಿನಗಳು ಖ್ಯಾತಿಯ ನಟ ಚೇತನ್ ಕುಮಾರ್ ಮೇಕೆದಾಟು ಯೋಜನೆಯನ್ನು ವಿರೋಧಿಸಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಚೇತನ್, 'ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಇದೊಂದು ಕೆಟ್ಟ ಯೋಜನೆ.. ವಿಪರ್ಯಾಸವೆಂದರೆ, ‘ಪರಿಸರ’ ಮತ್ತು ‘ಪ್ರವಾಹ ನಿರ್ವಹಣೆಯೇ ನಮ್ಮ ಸರ್ಕಾರವು ಜಯಿಸಲು ಪ್ರಯತ್ನಿಸುತ್ತಿರುವ ಮುಖ್ಯ ಸವಾಲುಗಳು (ಬ್ರಾಂಡ್ ಬೆಂಗಳೂರು).. ಮೇಕೆದಾಟು ಅಣೆಕಟ್ಟು ಪರಿಸರವನ್ನು ನಾಶಪಡಿಸುತ್ತದೆ. ಬೆಂಗಳೂರಿನ ಬಳಿಯ ಹಳ್ಳಿಗಳಲ್ಲಿ ಇದರಿಂದ ಪ್ರವಾಹ ಸಂಭವಿಸುತ್ತದೆ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಿವ ಯೋಜನೆಯಾಗಿದ್ದರಿಂದ ತಮಿಳುನಾಡಿಗೆ ತೊಂದರೆಯಾಗುವುದಿಲ್ಲ. ಹೆಚ್ಚುವರಿ ನೀರು ಸಮುದ್ರಕ್ಕೆ ಸೇರುವ ಬದಲು ಸದ್ಭಳಕೆ ಮಾಡಿಕೊಳ್ಳಲಾಗುವುದು ಎಂಬು ಕರ್ನಾಟಕದ ವಾದ. ಆದರೆ, ಅದನ್ನು ತಮಿಳುನಾಡು ಒಪ್ಪುತ್ತಿಲ್ಲ. ಹೀಗಿದ್ದರೂ ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು ಸಿಎಂ ಸಿದ್ಧರಾಮಯ್ಯ ಬಜೆಟ್‌ನಲ್ಲಿ ಹೇಳಿದ್ದಾರೆ.

SCROLL FOR NEXT