ರಾಜ್ಯ

ಅಭಿಮಾನಿಗಳು ಟ್ರೋಲ್ ಮಾಡೋ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು: ಶಾಸಕಿ ನಯನಾ ಮೋಟಮ್ಮ

Nagaraja AB

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಗುರುವಾರ ವಿಧಾನಸಭೆಯಲ್ಲಿ ನೀಡಿದ್ದ ಒಂದು ಹೇಳಿಕೆಯಿಂದ ಭಾರೀ ಟ್ರೋಲ್‌ ಆಗುತ್ತಿದ್ದಾರೆ. ಮೇಜು ತಟ್ಟುವ ಮೂಲಕ ಅವರನ್ನು ಬೆಂಬಲಿಸಿದ್ದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕೂಡ ಟ್ರೋಲ್‌ಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಇವರಿಬ್ಬರ ವಿಡಿಯೋ ಭಾರೀ ವೈರಲ್‌ ಆಗಿದೆ. ಈ ಬಗ್ಗೆ ಟ್ವೀಟ್‌ ಮೂಲಕ ನಯನಾ ಮೋಟಮ್ಮ ಸ್ಪಷ್ಟನೆ ನೀಡಿದ್ದಾರೆ.

ಸಾವಾಗಿಲ್ಲ ಸಾವಾಗಿಲ್ಲ ಮಾರ್ರೆ ನಿಜ! ಅಭಿಮಾನಿಗಳು ಟ್ರೋಲ್ ಮಾಡುವ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು. ಪ್ರದೀಪ್ ಈಶ್ವರ್ ಅವರು ಹೇಳಿರುವ ವಿಚಾರದಲ್ಲಿ ಯಾವ ತಪ್ಪು ಇಲ್ಲ. ಮಾಹಿತಿ ಕೊರತೆಯಿದ್ದಿರಬಹುದು ಅಷ್ಟೇ. ಆದರೆ, ಅವರು ಹೇಳಿರುವ ವಿಚಾರ, ಎತ್ತಿರುವ ಪ್ರಶ್ನೆ ಎರಡೂ ಸರಿಯಾಗಿಯೇ ಇದೆ. ಹಾಗಾಗಿಯೇ ನಾನು ಸಹ ಅವರ ಮಾತನ್ನು ಬೆಂಬಲಿಸಿದ್ದೇನೆ ಎಂದು ಸದನದಲ್ಲಿನ ತಮ್ಮ ವರ್ತನೆಗೆ ಸ್ಪಷ್ಟನೆ ನೀಡಿದ್ದಾರೆ. ನಯನಾ ಮೋಟಮ್ಮ ಅವರ ಟ್ವೀಟ್‌ಗೆ ಕೆಲವರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಷ್ಟಕ್ಕೂ ಸದನದಲ್ಲಿ ಆಗಿದ್ದೇನು? ವಿಧಾನಸಭೆಯಲ್ಲಿ ಗುರುವಾರ ಮಂಡ್ಯದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ  ಚರ್ಚೆ ನಡೆಯುತ್ತಿತ್ತು. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆಯುತ್ತಿತ್ತು. ಪರಿಸ್ಥಿತಿ ಸ್ವಲ್ಪ ತಿಳಿಯಾಗುತ್ತಲೇ ಮಧ್ಯಪ್ರವೇಶಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌, ಒಂದು ಸಾವಿಗೆ ಇಷ್ಟೊಂದು ಹೋರಾಟ ಮಾಡ್ತಿದ್ದಾರೆ, ಕೋವಿಡ್‌ ಟೈಂನಲ್ಲಿ ಸಾವಿರಾರು ಸಾವು ಆಯ್ತು. ಅವುಗಳಿಗೆ ನ್ಯಾಯ ಬೇಡ್ವಾ ಎಂದು ಪ್ರಶ್ನಿಸಿದ್ದರು.

ಈ ವೇಳೆ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್, ಏಯ್ ಪ್ರದೀಪ್‌ ಈಶ್ವರ್‌ ಒಂದು ಸಾವಾಗಿಲ್ಲ ಮಾರ್ರೆ ಎಂದು ತಿದ್ದುವ ಪ್ರಯತ್ನ ಮಾಡಿದ್ದರು. ಪ್ರದೀಪ್ ಈಶ್ವರ್ ಪಕ್ಕದಲ್ಲಿಯೇ ಕುಳಿತಿದ್ದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮೊದಲಿಗೆ ಚಿಕ್ಕಬಳ್ಳಾಪುರ ಶಾಸಕರ ಹೇಳಿಕೆಗೆ ಮೇಜು ಕುಟ್ಟಿ ಬೆಂಬಲಿಸಿದ್ದರು. ಬಳಿಕ ನಕ್ಕು, ಮುಖ ಮುಚ್ಚಿಕೊಂಡಿದ್ದರು. ಈ ವಿಡಿಯೋ ಕೂಡ ಭಾರೀ ಟ್ರೋಲ್‌ಗೆ ಒಳಗಾಗುತ್ತಿದೆ. 

SCROLL FOR NEXT