ರಾಜ್ಯ

ಅನ್ನಭಾಗ್ಯ ಯೋಜನೆ: ನೇರ ನಗದು ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

Lingaraj Badiger

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅತ್ಯಂತ ಪ್ರಮುಖವಾದ 'ಅನ್ನಭಾಗ್ಯ' ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ತಲಾ 170 ರೂ. ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದ್ದಾರೆ.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 'ಅನ್ನಭಾಗ್ಯ' ಯೋಜನೆಯಡಿ 170 ರೂಪಾಯಿ ನಗದು ವರ್ಗಾವಣೆಗೆ ಚಾಲನೆ ನೀಡಿದರು. 

ನಗದು ವರ್ಗಾವಣೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ನಮ್ಮ 5 ಗ್ಯಾರಂಟಿಗಳಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ ಯೋಜನೆ. ದೇಶದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದು ಯುಪಿಎ ಸರ್ಕಾರ. ಮನಮೋಹನ್​ ಸಿಂಗ್ ನೇತೃತ್ವದ ಸರ್ಕಾರ ಈ ಕಾಯ್ದೆ ಜಾರಿಗೆ ತಂದಿದ್ದು. ರಾಜ್ಯದ 4.42 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ. ಮೊದಲ ಸಂಪುಟದಲ್ಲೇ 5 ಗ್ಯಾರಂಟಿ ಜಾರಿಗೆ ತೀರ್ಮಾನ ಮಾಡಿದ್ದೆವು ಎಂದರು.

ಮುಂದಿನ 15 ದಿನಗಳಲ್ಲಿ 1.28 ಕೋಟಿ ಪಡಿತರ ಕುಟುಂಬಗಳಿಗೆ ನೇರವಾಗಿ ನಗದು ವರ್ಗಾವಣೆ ಆಗಲಿದೆ. ಈ ಯೋಜನೆಗ ಅನುಷ್ಠಾನಕ್ಕಾಗಿ ಪ್ರಸ್ತುತ ಬಜೆಟ್‌ನಲ್ಲಿ 10 ಸಾವಿರ ಕೋಟಿ ಹಣ ನಿಗದಿ ಮಾಡಲಾಗಿದೆ.

'ಅನ್ನಭಾಗ್ಯ' ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅದರಂತೆ ಸಿದ್ದರಾಮಯ್ಯ ಅವರು 10 ಕೆಜಿ ಅಕ್ಕಿ ನೀಡಲು ಮುಂದಾಗಿದ್ದರು. ಆದರೆ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ಹಣ ನೀಡುವುದಾಗಿ ಘೋಷಿಸಿದ್ದರು. ಈ ಹಣವನ್ನು ಆಹಾರ ಪದಾರ್ಥಗಳ ಖರೀದಿಗೆ ಮಾತ್ರ ಬಳಕೆ ಮಾಡಬೇಕೆಂದು ನಾಡ ಬಾಂಧವರಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

SCROLL FOR NEXT