ರಾಜ್ಯ

ಅನ್ನ ಭಾಗ್ಯ, ನಗದು ಭಾಗ್ಯವಾಗಿ ಮಾರ್ಪಟ್ಟಿದೆ: ಮಾಜಿ ಸಿಎಂ ಬೊಮ್ಮಾಯಿ

Manjula VN

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಪ್ರತಿ ಫಲಾನುಭವಿಗಳಿಗೆ ರೂ 170 ನೀಡುವುದಾಗಿ ಸರ್ಕಾರ ಭರವಸೆ ನೀಡಿದ್ದು, ಇದರಿಂದ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡುವುದಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭರವಸೆ ನೀಡಿತ್ತು. ಆದರೀಗ ಅಕ್ಕಿ ನೀಡದೆ, ಹಣ ನೀಡುವುದಾಗಿ ಹೇಳಿದೆ. ಇದೀಗ ಅನ್ನ ಭಾಗ್ಯ ನಗದು ಭಾಗ್ಯವಾಗಿ ಮಾರ್ಪಟ್ಟಿದೆ. ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಆಹಾರ ಧಾನ್ಯದ ಬದಲು ಹಣ ನೀಡುತ್ತಿದೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

ಅಕ್ಕಿ ಸಿಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ರಾಜ್ಯ ಸರ್ಕಾರ ಈ ಹಿಂದೆಯೇ ಕೇಂದ್ರಕ್ಕೆ ಮಾಹಿತಿ ನೀಡಿದೆಯೇ? ನನಗೆ ಗೊತ್ತಿರುವ ಪ್ರಕಾರ ಪಂಜಾಬ್, ತೆಲಂಗಾಣ, ಛತ್ತೀಸ್‌ಗಢ ಅನ್ನ ಕೊಡಲು ಸಿದ್ಧವಾಗಿತ್ತು. ಸಂಗ್ರಹಣೆಗಾಗಿ ಕೆಲಸ ಮಾಡುವ ಬದಲು ಸರ್ಕಾರ ಈಗ ಹಣ ನೀಡುತ್ತಿದೆ ಎಂದು ಕಿಡಿಕಾರಿದರು.

ಅಕ್ಕಿ ಕಾಳಸಂತೆ ಪಾಲಾಗುತ್ತಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ವಿತರಿಸಲಾದ ಆಹಾರ ಧಾನ್ಯಗಳ ದುರುಪಯೋಗವನ್ನು ಪ್ರೋತ್ಸಾಹಿಸದಂತೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ನೀಡುವ ಭರವಸೆಯನ್ನು ಸರಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಸರ್ಕಾರದ ಎಲ್ಲಾ 5 ಗ್ಯಾರಂಟಿ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ನೀಲನಕ್ಷೆ, ನಿರ್ದೇಶನ ಮತ್ತು ಭವಿಷ್ಯವಿಲ್ಲದಂತಾಗಿದೆ. ಪ್ರತಿಯೊಂದು ಗ್ಯಾರಂಟಿ ಯೋಜನೆಯಿಂದಲು ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿದರು. ಇದೇ ವೇಳೆ ಬಜೆಟ್ ಕುರಿತಂತೆ ಮಾತನಾಡಿ, ರಾಜ್ಯ ಸರ್ಕಾರದ ನಡೆಯಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ಹೊರೆಯಾಗಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ವರ್ಗಾವಣೆ ಹಗರಣ ನಡೆಸುತ್ತಿದೆ. “ವರ್ಗಾವಣೆ ಸಂಬಂಧಿ ಅನುಕೂಲಕ್ಕಾಗಿ ಹಿಂದೆಂದೂ ಕಾಣದಷ್ಟು ಜನರು ವಿಧಾನಸೌಧಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ನಗದು ವರ್ಗಾವಣೆ ಹಗರಣ ನಡೆಯುತ್ತಿದೆ ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರ್ಕಾರವನ್ನು ಶೇ.40% ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ಆರೋಪಿತ್ತು. ಹೀಗಾಗಿ. ಸರ್ಕಾರ 2013 ಮತ್ತು 2023 ರ ನಡುವಿನ ಎಲ್ಲಾ ಭ್ರಷ್ಟಾಚಾರ ಆರೋಪಗಳನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು

SCROLL FOR NEXT