ರಾಜ್ಯ

ಹೆಚ್ಚಿದ ಮಂಗಗಳ ಕಾಟ: ಚುನಾವಣಾ ಸಂದರ್ಭದಲ್ಲೂ ಬಂದೂಕು ಇಟ್ಟುಕೊಳ್ಳಲು ರೈತರಿಗೆ ಅನುಮತಿ ನೀಡಿ: ಸರ್ಕಾರಕ್ಕೆ ಪುತ್ತೂರು ಶಾಸಕ ಆಗ್ರಹ

Manjula VN

ಬೆಂಗಳೂರು: ರೈತರು ತಮ್ಮ ಬೆಳೆ ನಾಶಪಡಿಸುವ ಪ್ರಾಣಿಗಳನ್ನು ಓಡಿಸಲು ಚುನಾವಣೆ ಸಂದರ್ಭದಲ್ಲೂ ಬಂದೂಕು ಇಟ್ಟುಕೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಮಂಗಳವಾರ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಶೂನ್ಯ ವೇಳೆ ಮಾತನಾಡಿದ ಅವರು, ಮಂಗಗಳ ಕಾಟ ರೈತರ ತಲೆದೋರಿವೆ. ಪಟಾಕಿಗಳ ಸಿಡಿತಕ್ಕೆ ಅವುಗಳು ಹೆದರುತ್ತಿಲ್ಲ. ಹೀಗಾಗಿ ಚುನಾವಣಾ ಸಂದರ್ಭದಲ್ಲಿಯೂ ಬಂದೂಕು ಇಟ್ಟುಕೊಳ್ಳಲು ರೈತರಿಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ಚುನಾವಣಾ ಪೂರ್ವದಲ್ಲಿ, ನೀತಿ ಸಂಹಿತೆಯಿಂದಾಗಿ ರೈತರು ತಮ್ಮ ಬಂದೂಕುಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಒಪ್ಪಿಸಬೇಕಾಗಿದೆ. ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿ ಲೋಕಸಭೆ ಮತ್ತು ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಚುನಾವಣೆಗಳು ಎದುರಾಗಲಿವೆ. "ರೈತರು ಮತ್ತೆ ಪೊಲೀಸರಿಗೆ ಬಂದೂಕುಗಳನ್ನು ಒಪ್ಪಿಸಬೇಕಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 11,200 ಲೈಸೆನ್ಸ್ ಹೊಂದಿರುವವರು ತಮ್ಮ ಬೆಳೆಯನ್ನು ರಕ್ಷಿಸಲು ಬಂದೂಕುಗಳನ್ನು ಬಳಸುತ್ತಿದ್ದಾರೆ, ಹೊಸ ತಲೆಮಾರಿನ ಮಂಗಗಳು ಪಟಾಕಿಗಳಿಗೆ ಹೆದರುತ್ತಿಲ್ಲ. ಅವುಗಳಿಗೆ ಬೆದರಿಸಲು ಗನ್'ಗಳ ಅಗತ್ಯವಿದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ವಿನಾಯಿತಿ ಸಮಿತಿಯಿದ್ದು, ರೈತರು ಸಮಿತಿಗೆ ಅರ್ಜಿ ಸಲ್ಲಿಸಿ, ಪೂರ್ವಾನುಮತಿ ಪಡೆದು, ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬಹುದು ಎಂದು ತಿಳಿಸಿದರು

SCROLL FOR NEXT