ಬೆಂಗಳೂರು: 100 ದಿನಗಳೊಳಗಾಗಿ ತ್ಯಾಜ್ಯ ನಿರ್ವಹಣೆ, ಪಾದಚಾರಿ ತೆರವು ಕಾರ್ಯಾಚರಣೆ ನಡೆಸುವಂತೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ನೀಡಿರುವ ಗುರಿ ಮುಟ್ಟಲು ಪಾಲಿಕೆ ಸಿದ್ಧವಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ಹೇಳಿದರು.
ವಲಯ ಆಯುಕ್ತರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಗರದಲ್ಲಿನ ಬ್ಲಾಕ್‌ಸ್ಪಾಟ್‌ಗಳ ಸರಿಪಡಿಸುವ ಕೆಲಸವನ್ನು ಪಾಲಿಕೆ ಮಾಡಲಿದೆ. ಇದಕ್ಕಾಗಿ ಮಾರ್ಷಲ್‌ಗಳನ್ನು ನಿಯೋಜಿಸಲಾಗುವುದು. ಫುಟ್ ಪಾತ್ ಮೇಲಿನ ಅತಿಕ್ರಮಣವನ್ನೂ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಕಳೆದ ಎರಡು ವಾರದಿಂದ ಹೆಚ್ಚಿನ ಪ್ರಮಾಣ ಕಂದಾಯ ವಸೂಲಿ ಬಗ್ಗೆ ಗಮನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಅಧಿಕಾರಿಗಳಿಗೆ ವಾರ ಮತ್ತು ತಿಂಗಳ ಆಧಾರದಲ್ಲಿ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ನೀಡಲಾಗಿದೆ. ನಿಗದಿತ ಗುರಿ ಸಾಧನೆ ಮಾಡದ ಅಧಿಕಾರಿಗಳನ್ನು ಬೇರೆ ವಲಯಗಳಿಗೆ ಮತ್ತು ನಾನ್ ಅಕ್ಸಿಕ್ಯೂಟಿವ್ ಹುದ್ದೆಗೆ ವರ್ಗಾವಣೆ ಮಾಡಲಾಗುವುದು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಳೆದ 2022-23ನೇ ಸಾಲಿನಲ್ಲಿ ರೂ.3,300 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿತ್ತು. ಈ ವರ್ಷ ಶೇ.50ರಷ್ಟು ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಳ್ಳಲಾಗಿದೆ. ಒಟ್ಟಾರೆ, ಆರ್ಥಿಕ ವರ್ಷದ ಅಂತ್ಯಕ್ಕೆ ರೂ.4,567 ಕೋಟಿ ಸಂಗ್ರಹಿಸಬೇಕಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ವಿಚಾರ ಕುರಿತು ಮಾತನಾಡಿ, ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ನಡೆಸಬೇಕಾಗಿದೆ. ಕ್ಯಾಂಟೀನ್ ನಡೆಸಲು 80 ಕೋಟಿ ರೂ.ಗಳ ಅಗತ್ಯವಿದೆ ಎಂದು ಮಾಹಿತಿ ನೀಡಿದರು.