ರಾಜ್ಯ

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಇನ್ನು ಮುಂದೆ ಕಾಣಸಿಗಲಿವೆ ಆಕರ್ಷಕ ಕಲಾಕೃತಿಗಳು!

Srinivas Rao BV

ಬೆಂಗಳೂರು: ಬೆಂಗಳೂರು ವಿಭಾಗದ ರೈಲ್ವೆ ನಿಲ್ದಾಣಗಳನ್ನು ಕಲಾಕೃತಿಗಳ ಮೂಲಕ ಇನ್ನಷ್ಟು ಆಕರ್ಷಣೀಯವಾಗಿಸಲು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. 

ಮೊದಲ ಹಂತದಲ್ಲಿ ಕೆಎಸ್ ಆರ್ ಬೆಂಗಳೂರು, ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಕೆಆರ್ ಪುರಂ, ಯಲಹಂಕಾ, ಮಲ್ಲೇಶ್ವರಂ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. 

ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಕುಸುಮಾ ಹರಿಪ್ರಸಾದ್ ಈ ಬಗ್ಗೆ ಮಾತನಾಡಿದ್ದು, ಹುಬ್ಬಳ್ಳಿ ಮೂಲದ ಆರ್ಟ್ ಸ್ಟ್ರೀಟ್ ಅಂತಾರಾಷ್ಟ್ರೀಯ ಸೊಲ್ಯೂಷನ್ಸ್ (ಆರ್ಟ್ ವಾಲೆ ಎಂದೇ ಖ್ಯಾತಿ ಪಡೆದಿರುವ ಸಂಸ್ಥೆ) ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಲಾಕೃತಿಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ರಚಿಸುವುದಕ್ಕಾಗಿ ತಗುಲುವ ವೆಚ್ಚವನ್ನು ಕಂಪನಿಗಳಿಂದ ಸಿಎಸ್ ಆರ್ ಫಂಡಿಂಗ್ ನಿಂದ ಭರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರು ತೆರಳಿದ್ದಾಗ ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮಾ ಗಾಂಧಿ ಚರಕದೊಂದಿಗೆ ಇರುವ ಕಲಾಕೃತಿ ಅಂತಿಮಗೊಳಿಸಲಾಗುತ್ತಿದೆ. ಪ್ರವೇಶದ ಸ್ಥಳದಲ್ಲಿ ಸ್ಕ್ರ್ಯಾಪ್ ವಸ್ತುಗಳನ್ನು ಬಳಕೆ ಮಾಡಿಕೊಂಡು ಮೇಕ್ ಇನ್ ಇಂಡಿಯಾ ಸಿಂಹವನ್ನು ಸ್ಥಾಪಿಸಲಾಗಿದೆ. ಸಭಾಂಗಣ ಪ್ರದೇಶದಲ್ಲಿ ತರಬೇತಿಯ ಮಾದರಿ ಮತ್ತೊಂದು ಕಲಾಕೃತಿಯಾಗಿದೆ ಎಂದು ಎಡಿಆರ್ ಎಂ ಹೇಳಿದ್ದಾರೆ. 

ವಿವಿಧ ನಿಲ್ದಾಣಗಳಲ್ಲಿನ ಕಲಾಕೃತಿಗಳು ಒಂದು ಪ್ರದೇಶಕ್ಕೆ ನಿರ್ದಿಷ್ಟವಾದ ಪಾತ್ರವನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು. "ಮಲ್ಲೇಶ್ವರಂ ರೈಲು ನಿಲ್ದಾಣದಲ್ಲಿನ ಥೀಮ್ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಆಧಾರದಲ್ಲಿ ಇರುತ್ತದೆ. ಜನಪ್ರಿಯ ಕರಗ ಉತ್ಸವದ ಕಲಾಕೃತಿಯನ್ನು ಇಲ್ಲಿ ಪ್ರದರ್ಶಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ರೀತಿಯ ಕಲಾಕೃತಿಗಳನ್ನು ಸ್ಥಾಪಿಸುವುದರಿಂದ ಪ್ರಯಾಣಿಕರು ಪ್ರಯಾಣವನ್ನು ಆಸ್ವಾದಿಸುವುದಕ್ಕೆ ಸಹಕಾರಿಯಾಗಲಿದೆ ಎಂಬುದು ರೈಲ್ವೆಯ ಯೋಜನೆಯಾಗಿದೆ. ಎರಡನೇ ಹಂತದಲ್ಲಿ ಬೆಂಗಳೂರು ವಿಭಾಗದ ಮತ್ತಷ್ಟು ನಿಲ್ದಾಣಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT