ರಾಜ್ಯ

ಶಕ್ತಿ ಯೋಜನೆಗೆ ವಿರೋಧ: ಜುಲೈ 27ರಂದು ಬಂದ್ ಗೆ ಕರೆ; ಆಟೋ, ಕ್ಯಾಬ್, ಖಾಸಗಿ ಬಸ್ ಸಂಚಾರ ಸ್ಥಗಿತ

Srinivasamurthy VN

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ವಿರೋಧಿಸಿ ಜುಲೈ 27ರಂದು ಬಂದ್ ಗೆ ಕರೆ ನೀಡಲಾಗಿದ್ದು, ಆಟೋ, ಕ್ಯಾಬ್, ಖಾಸಗಿ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ತಮ್ಮ ಆದಾಯಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದು ಹೀಗಾಗಿ ಇದನ್ನು ವಿರೋಧಿಸಿ ಆಟೋ, ಕ್ಯಾಬ್, ಖಾಸಗಿ ಬಸ್ ಚಾಲಕರು ಜುಲೈ 27ರಂದು ಬಂದ್ ಗೆ ಕರೆ ನೀಡಿದ್ದಾರೆ. ಜು.27 ರಂದು ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‍ಗಳ ಮಾಲೀಕರು ಹಾಗೂ ಚಾಲಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಇದರಿಂದಾಗಿ ಜು.26ರ ಮಧ್ಯರಾತ್ರಿ 12 ರಿಂದ 27ರ ಮಧ್ಯರಾತ್ರಿಯ ವರೆಗೂ ರಾಜ್ಯಾದ್ಯಂತ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್‍ಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಖಾಸಗಿ ಬಸ್ ಮಾಲೀಕರ ಸಂಘದ ಎಸ್. ನಟರಾಜ್ ಶರ್ಮಾ, ಜುಲೈ 26ರ ಮಧ್ಯರಾತ್ರಿ 12 ರಿಂದ 27ರ ಮಧ್ಯರಾತ್ರಿ 12 ರ ವರೆಗೆ ಓಲಾ, ಉಬರ್, ಆಟೋ ಕ್ಯಾಬ್ ಹಾಗೂ ಖಾಸಗಿ ಬಸ್ ಸಂಚಾರ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಆಟೋ,ಕ್ಯಾಬ್, ಟ್ಯಾಕ್ಸಿ, ಓಲಾ,ಉಬರ್ ಹಾಗೂ ಖಾಸಗಿ ಬಸ್ ಸೇರಿದಂತೆ 23 ಸಂಘಟನೆಗಳ ಮುಖಂಡರಾದ ರಾಧಾಕೃಷ್ಣ ಹೊಳ್ಳ, ಜಿ. ನಾರಾಯಣ ಸ್ವಾಮಿ, ರಘು ನಾರಾಯಣಗೌಡ, ಎಂ. ಮಂಜುನಾಥ್, ಗಂಡಸಿ ಸದಾನಂದ ಸ್ವಾಮಿ ಭಾಗಿಯಾಗಿದ್ದರು.

ಸರ್ಕಾರದ ಮುಂದೆ ಹಲವು ಬೇಡಿಕೆಗಳು
ವೈಟ್‍ಬೋರ್ಡ್ ವಾಹನಗಳು ನಿಯಮ ಉಲ್ಲಂಘಿಸಿ ಬಾಡಿಗೆಗೆ ಓಡಿಸುವುದನ್ನು ತಡೆಯಬೇಕು ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಚಾಲಕರ ಶಾಲಾ-ಕಾಲೇಜು ಮಕ್ಕಳಿಗೆ ಧನ ಸಹಾಯ ನೀಡಬೇಕು. ಸರ್ಕಾರಿ ವಾಹನದಲ್ಲಿ ನಿರ್ದಿಷ್ಟ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕು. ಶಕ್ತಿ ಯೋಜನೆಗೆ ಹೊಸ ಮಾರ್ಗಸೂಚಿ ರೂಪಿಸಬೇಕು. ಪ್ರವಾಸಿ ಹಾಗೂ ಕಾಂಟ್ರಾಕ್ಟ್ ಕ್ಯಾರೇಜ್ ಬಸ್‍ಗಳಿಗೆ ತೆರಿಗೆ ಕಡಿತಗೊಳಿಸಬೇಕು. ಐದು ಪರ್ಸೆಂಟ್‍ಗಳಿಗಿಂತ ಹೆಚ್ಚು ಕಮಿಷನ್ ಪಡೆಯುತ್ತಿರುವ ಓಲಾ ಮತ್ತು ಊಬರ್ ಮತ್ತು ರೆಡ್ ಬಸ್‍ಗಳಂತಹ ಆನ್‍ಲೈನ್ ಕಂಪೆನಿಗಳಿಗೆ ನಿರ್ಬಂಧ ಹೇರಬೇಕು. ಚಾಲಕರಿಗೆ ವಸತಿ ಯೋಜನೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.

ಬಂದ್ ಗೇನು ಕಾರಣ?
ಮೂಲಗಳ ಪ್ರಕಾರ ರಾಜ್ಯ ಸರ್ಕಾರದ ಕೆಲವು ನೀತಿಗಳಿಂದ ಖಾಸಗಿ ಸಾರಿಗೆಗೆ ನಷ್ಟವಾಗುತ್ತಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಶಕ್ತಿ ಯೋಜನ ಮಾತ್ರವಲ್ಲದೇ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ವಾಹನವಾಗಿ ಉಪಯೋಗಿಸುತ್ತಿರುವುದು, ದ್ವಿಚಕ್ರ ವಾಹನಗಳಿಗೆ ಮುಕ್ತ ಪರವಾನಿಗೆ ನೀಡುತ್ತಿರುವುದು ಸೇರಿದಂತೆ ಹಲವು ಯೋಜನೆಗಳಿಂದ ಖಾಸಗಿ ಸಾರಿಗೆ ನೆಲ ಕಚ್ಚಿದೆ.

ಇದರಿಂದ ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಚಾಲಕರ ಜೀವನ ದುರ್ಬರವಾಗಿದೆ.ಸರ್ಕಾರದ ಈ ನೀತಿಗಳಿಂದ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಚಾಲಕರು ಸಾಲ, ವಿಮೆ ಕಟ್ಟಲು ಮತ್ತು ಜೀವನ ಸಾಗಿಸಲು ಕಷ್ಟಪಡುವಂತಾಗಿದೆ. ಇದರಿಂದ ರಾಜ್ಯದ 23 ಸಾರಿಗೆ ಸಂಘಟನೆಗಳು ಸೇರಿ ಪ್ರತಿಭಟನೆಗೆ ಮುಂದಾಗುತ್ತಿದ್ದೇವೆ ಎಂದು ಖಾಸಗಿ ಸಾರಿಗೆ ಮಾಲೀಕರು ಆರೋಪಿಸಿದ್ದಾರೆ.

SCROLL FOR NEXT