ರಾಜ್ಯ

ಸಂಗೀತ, ನೃತ್ಯ ಮತ್ತು ಪ್ರದರ್ಶಕ ಕಲೆಗಳ ಕೋರ್ಸ್: ನೋಂದಾಯಿತ ಸಂಸ್ಥೆಗಳು ವಿವಿ ಜೊತೆ ಒಡಂಬಡಿಕೆಗೆ ಅವಕಾಶ -ಪ್ರೊ. ನಾಗೇಶ್ ವಿ.ಬೆಟ್ಟಕೋಟೆ

Nagaraja AB

ಹುಬ್ಬಳ್ಳಿ: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದೊಡನೆ ರಾಜ್ಯದ ಯಾವುದೇ ನೋಂದಾಯಿತ ಶಿಕ್ಷಣ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡು ಸಂಗೀತ, ನೃತ್ಯ ಮತ್ತು ಮತ್ತು ಪ್ರದರ್ಶಕ ಕಲೆಗಳ ಕೋರ್ಸುಗಳನ್ನು ನಡೆಸಲು ಅನುವಾಗುವ ನಿಯಮಗಳಿಗೆ ರಾಜ್ಯಪಾಲರ ಅಂಕಿತ ದೊರೆತಿದೆ ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಕೇಂದ್ರ ಸ್ಥಾನದಲ್ಲಿ ಮಾತ್ರ ನಡೆಸುತ್ತಿದ್ದ ಕೋರ್ಸುಗಳನ್ನು ರಾಜ್ಯವ್ಯಾಪಿ ನಡೆಸಲು ಸಂಸ್ಥೆಗಳಿಗೆ ಅವಕಾಶವಿದೆ. ಈಗಾಗಲೇ ರಾಜ್ಯದ ಏಳು ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದೊಡನೆ ಒಡಂಬಡಿಕೆ ಮಾಡಿಕೊಂಡು ಕೋರ್ಸುಗಳನ್ನು ನಡೆಸುತ್ತಿವೆ ಎಂದರು. 

ಅಂತರಾಷ್ಟ್ರೀಯ ವೈಯಲಿನ್ ವಾದಕರು, ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಲ್. ಸುಬ್ರಹ್ಮಣ್ಯಂ ಅವರು ತಮ್ಮ ಗ್ಲೋಬಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಸಂಸ್ಥೆಯಲ್ಲಿ ಸಂಗೀತ ಕೋರ್ಸ್, ಡಾ. ಅನುರಾಧ ವಿಕ್ರಾಂತ್ ಅವರು ತಮ್ಮ ದೃಷ್ಟಿ ಆರ್ಟ್ ಸೆಂಟರ್‌ ನಲ್ಲಿ ನೃತ್ಯಕ್ಕೆ ಸಂಬಂಧಿಸಿದ ಕೋರ್ಸ್ ಹಾಗೂ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಎಂ.ಇ.ಎಸ್ ಶಿಕ್ಷಣ ಸಂಸ್ಥೆ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳು ನಾಟಕದ ಕೋರ್ಸುಗಳನ್ನು ನಡೆಸಲು ಒಡಂಬಡಿಕೆ ಮಾಡಿಕೊಂಡಿರುತ್ತವೆ ಎಂದು ಅವರು ಮಾಹಿತಿ ನೀಡಿದರು. 

ಸರ್ಕಾರವು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ರೂ.1.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈಗಾಗಲೇ ವಿಶ್ವವಿದ್ಯಾಲಯದಲ್ಲಿ ಪೂರ್ಣ ಪ್ರಮಾಣ ಬೋಧಕರಿದ್ದು, ಉಳಿದ ಸಿಬ್ಬಂದಿಗಳ ಖಾಯಂ ನೇಮಕಾತಿ ಕುರಿತು ಸರ್ಕಾರಕ್ಕೆ ತಿಳಿಸಲಾಗುವುದು. ಜುಲೈ 30 ರೊಳಗೆ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು. 

SCROLL FOR NEXT