ರಾಜ್ಯ

ಸೌಂಡ್ ಕಡಿಮೆ ಮಾಡಿ ಎಂದ ಪೊಲೀಸ್ ಪೇದೆ ಹತ್ಯೆಗೆ ಯತ್ನ: ಮೂವರ ಬಂಧನ

Manjula VN

ಬೆಂಗಳೂರು: ಆಟೋ ರಿಕ್ಷಾದಲ್ಲಿ ಜೋರಾಗಿ ಹಾಕಿದ್ದ ಹಿನ್ನೆಲೆಯಲ್ಲಿ ವಾಲ್ಯೂಮ್ ಕಡಿಮೆ ಮಾಡುವಂತೆ ಕೇಳಿದ್ದಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಒಬ್ಬರನ್ನು ಹತ್ಯೆ ಮಾಡಲು ಯತ್ನ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ಆರ್.ಟಿ.ನಗರದ ಗಂಗಾನಗರ ಲೇಔಟ್ ನಿವಾಸಿ ಮಲ್ಲಿಕಾರ್ಜುನ ನಾಗನೂರ ಹಲ್ಲೆಗೊಳಗಾದ ಮುಖ್ಯ ಪೇದೆಯಾಗಿದ್ದಾರೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳವಾರ ರಾತ್ರಿ 8.20ರಿಂದ 8.35ರ ನಡುವೆ ಘಟನೆ ನಡೆದಿದೆ. ಈ ಸಂಬಂಧ ಕೆ.ಜಿ.ಹಳ್ಳಿ ಉಪವಿಭಾಗದ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ 10.25ರ ಸುಮಾರಿಗೆ ದೂರು ದಾಖಲಿಸಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಹೇಮಂತ್ ಕುಮಾರ್, ಧನುಷ್ ಮತ್ತು ಶರತ್ ಕುಮಾರ್ ಎಂದು ಗುರುತಿಸಲಾಗಿದೆ. ಕರ್ತವ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದೆ. ಈ ವೇಳೆ ಆಟೋವೊಂದರಲ್ಲಿ ಜೋರಾಗಿ ಹಾಡು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಸೌಂಡ್ ಕಡಿಮೆ ಇಡುವಂತೆ ತಿಳಿಸಿದೆ. ಆದರೆ, ಆರೋಪಿಗಳು ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಲು ಮುಂದಾದರು. ಆಟೋದಲ್ಲಿದ್ದ ಕಬ್ಬಿಣದ ರಾಡ್ ನಿಂದ ಹೊಡೆಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಂಚಾರ ಪೊಲೀಸರು ರಕ್ಷಣೆಗೆ ಬಾರದಿದ್ದರೆ, ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿತ್ತು ಎಂದು ಮಲ್ಲಿಕಾರ್ಜುನ ಅವರು ಹೇಳಿದ್ದಾರೆ.

ಆರೋಪಿಗಳಿಂದ ಆಟೋರಿಕ್ಷಾವನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ಕೊಲೆ ಯತ್ನ ಸೇರಿದಂತೆ ಐಸಿಸಿಯ ಇತರೆ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT