ಕುಂದಾಪ್ರ ಕನ್ನಡ ಹಬ್ಬದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ಮಾಹಿತಿ ನೀಡಿದರು. 
ರಾಜ್ಯ

ನಾಳೆ ಬೆಂಗಳೂರಲ್ಲಿ 'ವಿಶ್ವ ಕುಂದಾಪ್ರ ಕನ್ನಡ ಹಬ್ಬ'; ಸಿಎಂ ಸಿದ್ದರಾಮಯ್ಯ ಸೇರಿ ಹಲವು ನಟ, ನಿರ್ದೇಶಕರು ಭಾಗಿ

ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ 'ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ'ವನ್ನು ಆಚರಣೆ ಮಾಡುತ್ತಿದ್ದಾರೆ. ಈ ಪ್ರಯುಕ್ತ ರಾಜಧಾನಿ ಬೆಂಗಳೂರಿನಲ್ಲಿ ಈ ಸಲ ಜುಲೈ 23ರಂದು...

ಬೆಂಗಳೂರು: ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ 'ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ'ವನ್ನು ಆಚರಣೆ ಮಾಡುತ್ತಿದ್ದಾರೆ. ಈ ಪ್ರಯುಕ್ತ ರಾಜಧಾನಿ ಬೆಂಗಳೂರಿನಲ್ಲಿ ಈ ಸಲ ಜುಲೈ 23ರಂದು ದಿನವಿಡೀ ಆಚರಣೆ ಇರಲಿದ್ದು, ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಸ್ಥಿತರಿರಲಿದ್ದಾರೆ. ಮಾತ್ರವಲ್ಲ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವು ತಾರೆಯರು ಕೂಡ ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಇರಲಿದೆ.

ಇದು ಐದನೇ ವಿಶ್ವ ಕುಂದಾಪುರ ಕನ್ನಡ ದಿನವಾಗಿದ್ದು, ಈ ಸಲ ಇನ್ನಷ್ಟು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆಯ ಬಂಟರ ಸಂಘದ ಭವನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೂ ನಿರಂತರವಾಗಿ ಈ ಆಚರಣೆ ನಡೆಯಲಿದೆ.

ಸಮಾನಮನಸ್ಕ ಗೆಳೆಯರ ಸಾರಥ್ಯದಲ್ಲಿ ಆಯೋಜನೆಯಾಗುತ್ತ ಬಂದಿರುವ ಈ ದಿನಾಚರಣೆಯು ಈ ಸಲ 'ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು' ಎಂಬ ವೇದಿಕೆಯಡಿ ಆಯೋಜನೆಗೊಂಡಿದೆ. ಕುಂದಾಪ್ರ ಕನ್ನಡ ಹಬ್ಬದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ಮಾಹಿತಿ ನೀಡಿದರು.

ಇದು ಕುಂದಾಪುರ ನೆಲಮೂಲದ ಭಾಷಾ ಸಂಪತ್ತು, ಆಚಾರ-ವಿಚಾರ, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ ಮುಂತಾದ ಕುಂದಾಪುರ ಜನಜೀವನ, ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಸಾರುವ ಜೊತೆಗೆ ಇಲ್ಲಿ ನೆಲೆಸಿರುವ ಕುಂದಗನ್ನಡಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿರುತ್ತದೆ.  ಬೆಂಗಳೂರಿನಲ್ಲಿ ಲಕ್ಷಾಂತರ ಕುಂದಗನ್ನಡಿಗರಿದ್ದು ತಮ್ಮ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗೂ ಸಂಸ್ಕೃತಿ ವಿನಿಮಯದಂತಹ ಸದುದ್ದೇಶವನ್ನು ಕುಂದಾಪ್ರ ಕನ್ನಡ ಹಬ್ಬವು ಹೊಂದಿದೆ ಎಂದು ಅವರು ತಿಳಿಸಿದರು. 

ಜುಲೈ 23ರ ಭಾನುವಾರ ಬೆಳಗ್ಗೆ 9 ಗಂಟೆಗೆ ಈ ಕಾರ್ಯಕ್ರಮವನ್ನು ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ಕ್ಷೇತ್ರದ ಸಾಧಕ ಶಾಂತರಾಮ ಶೆಟ್ಟಿ ಬಾರ್ಕೂರು ಉದ್ಘಾಟಿಸಲಿದ್ದು, ಕುಂದಾಪುರ ಶಾಸಕ ಕಿರಣ್ ಕುಮಾರ್​ ಕೊಡ್ಗಿ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ  ವಿಧ್ಯುಕ್ತ ಚಾಲನೆ ದೊರಕಲಿದೆ.

ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಉಪಸ್ಥಿತಿ ಇರಲಿದ್ದು, ಶಾಸಕ ಎಂ. ಕೃಷ್ಣಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಬೆಂಗಳೂರು ಬಂಟರ ಸಂಘ ಅಧ್ಯಕ್ಷ ಎಂ. ಮುರಳೀಧರ ಹೆಗ್ಡೆ ಅವರ ಗೌರವ ಉಪಸ್ಥಿತಿ ಇರಲಿದೆ. 

ಕುಂದಾಪುರದ ಹಿರಿಮೆಯನ್ನು ಇನ್ನಷ್ಟು ವಿಸ್ತರಿಸಿದ ಊರಿನ ಸಾಧಕರಾದ ಪ್ರೊ.ಎ.ವಿ.ನಾವಡ ಮತ್ತು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇದೇ ಸಂದರ್ಭದಲ್ಲಿ ಊರ ಗೌರವಕ್ಕೆ ಭಾಜನರಾಗಲಿದ್ದಾರೆ. ಖ್ಯಾತ ಚಿತ್ರ ನಟ-ನಿರ್ದೇಶಕ ರಿಷಬ್ ಶೆಟ್ಟಿ, ನಟ ಪ್ರಮೋದ್ ಶೆಟ್ಟಿ ಮುಂತಾದವರು ಕಾರ್ಯಕ್ರಮದ ಮೆರಗು ಹೆಚ್ಚಿಸಲಿದ್ದಾರೆ. 

ಅಲ್ಲದೆ ಕುಂದಾಪುರ ಮೂಲದ ನಟ-ನಿರ್ದೇಶಕ ಉಪೇಂದ್ರ, ನಿರ್ದೇಶಕ ಯೋಗರಾಜ್ ಭಟ್ ಅವರನ್ನೂ ಆಹ್ವಾನಿಸಲಾಗಿದೆ. ತಮ್ಮ ಕಾರ್ಯದೊತ್ತಡದ ನಡುವೆಯೂ ಅವರು ಆಗಮಿಸುವ ಭರವಸೆ ನೀಡಿದ್ದು, ಸಮಾರಂಭದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ದೀಪಕ್ ಶೆಟ್ಟಿ ತಿಳಿಸಿದ್ದಾರೆ.

ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?
ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಜುಲೈ 17ರಂದು ಆಷಾಢ ಅಮಾವಾಸ್ಯೆ ಬಂದಿದ್ದು, ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವವರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಜು. 23ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. 

ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆ ಆಗಲಿದ್ದು ರಾಘವೇಂದ್ರ ಜನ್ಸಾಲೆಯವರ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ʼಬೇಡರ ಕಣ್ಣಪ್ಪʼ ಎನ್ನುವ ಯಕ್ಷಗಾನ ಪ್ರಸಂಗ, ಕಲಾಕದಂಬ ಆರ್ಟ್ಸ್ ಅವರಿಂದ ʼವೀರ ಬರ್ಬರಿಕʼ ಯಕ್ಷಗಾನ ಪ್ರಸಂಗ, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ʼಬಿಡುವನೇ ಬ್ರಹ್ಮಲಿಂಗ!?ʼ ಎನ್ನುವ ನೃತ್ಯ ರೂಪಕ, ಕಿರುತೆರೆ ಖ್ಯಾತಿಯ ಶ್ರಾವ್ಯ ಮರವಂತೆ, ಸಮೃದ್ಧಿ ಕುಂದಾಪುರ, ಪ್ರೀತಂ ಅವರ ʼಚಿತ್ರಪಟ ರಾಮಾಯಣʼ ಎಂಬ ಕಿರುನಾಟಕ ಪ್ರದರ್ಶನ ಇರಲಿದೆ.  ಸಾಸ್ತಾನದ ಖ್ಯಾತ ನಾಟಕ ತಂಡ ಅಲ್ವಿನ್ ಅಂದ್ರಾದೆ ಮತ್ತು ಸಹಕಲಾವಿದರ ತಿಳಿ ಹಾಸ್ಯ ಪ್ರಹಸನ, ಟೀಂ ಕುಂದಾಪುರಿಯನ್ಸ್ ಅವರ ʼಮಿಂಚುಳ: ಇದ್ ಕತ್ಲಿ-ಬೆಳಗಿನ ಕಥಿʼ ಎಂಬ ವಿಶೇಷ ನಾಟಕ ನೆರೆದವರಿಗೆ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ. 

ಉಪನ್ಯಾಸಕಿ ರೇಖಾ ಬಿ. ಬನ್ನಾಡಿ, ಉಪೇಂದ್ರ ಶೆಟ್ಟಿ, ಕವಿ ಎಚ್. ಡುಂಡಿರಾಜ್ ಅವರ ಭಾಷೆಯ ಬಹು ಆಯಾಮದ ಬಗ್ಗೆ ಮಾತು- ನುಡಿಚಾವಡಿ, ಜನಪ್ರಿಯ ಗಾಯಕರನ್ನು ಒಳಗೊಂಡ ಸ್ವರ ಕುಂದಾಪುರ ತಂಡದ ʼಕಾಡುವ ಹಾಡುಗಳ ಕಲರವʼ, ಕುಂದಾಪ್ರ ಕನ್ನಡದ ಖ್ಯಾತ ವಾಗ್ಮಿ ಮನು ಹಂದಾಡಿಯವರ ʼಲಘು ಧಾಟಿಯ ಬಿಗು ಭಾಷಣʼ  ಹಾಗೂ ಇನ್ನಿತರ ಮನರಂಜನೀಯ ಕಾರ್ಯಕ್ರಮಗಳು ಈ ಬಾರಿಯ ಕುಂದಾಪ್ರ ಕನ್ನಡ ಹಬ್ಬವನ್ನು ಅವಿಸ್ಮರಣೀಯಗೊಳಿಸಲಿವೆ ಎಂದರು.

ಕರಾವಳಿಯ ಅಪರೂಪದ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ವಯಸ್ಕರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು, ಮಕ್ಕಳಿಗೆ ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹಣೆಬೊಂಡ ಓಟ, ಗಿರ್ಗಿಟ್ಲಿ ಓಟ, ಚಿತ್ರಕಲೆ, ಮಹಿಳೆಯರಿಗೆ ಹಲಸಿನ ಕೊಟ್ಟೆ ಕಟ್ಟುವುದು, ಮಡ್ಲ್ ನೆಯ್ಯುವುದು ಇನ್ನಿತರ ಸ್ಪರ್ಧೆಗಳು ಹಬ್ಬದ ಬಯಲಿನ ಕಲರವವನ್ನು ಇಮ್ಮಡಿಗೊಳಿಸಲಿವೆ. 

ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ  ಹಾಲುಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್,  ಸುಕ್ಕಿನುಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್ನಂತಹ ವಿವಿಧ ಪಾನಕಗಳು,  ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ಲಿ ಸಾರು ಇನ್ನಿತರ  ಅಪರೂಪದ ಖಾದ್ಯ-ವೈವಿಧ್ಯ ಕುಂದಾಪ್ರ ಕನ್ನಡ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ.

ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರಮೋದಚಂದ್ರ ಭಂಡಾರಿ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT