ರಾಜ್ಯ

ಅಂಗಾಂಗ ದಾನ: ರಾಯಭಾರಿಯಾಗಲು ಅಶ್ವಿನಿ ಪುನೀತ್ ರಾಜಕುಮಾರ್‌ಗೆ ಆರೋಗ್ಯ ಇಲಾಖೆ ಆಹ್ವಾನ

Shilpa D

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಆರೋಗ್ಯ ಇಲಾಖೆ ಆಹ್ವಾನ ನೀಡಿದೆ.

ದೊಡ್ಮನೆ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವುದನ್ನ ಗಮನಿಸಿರುವ ಸಚಿವರು, ಆರೋಗ್ಯ ಇಲಾಖೆಯ ವತಿಯಿಂದ ಆಗಸ್ಟ್ 3 ರಂದು ಆಚರಿಸುವ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ.

ಆರೋಗ್ಯ ಇಲಾಖೆಯು ಆ.3ರಂದು ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂಗಾಂಗ ದಾನ ಮಾಡಿದ ರಾಜ್ಯದ 150 ಕುಟುಂಬಗಳನ್ನ ಸನ್ಮಾನಿಸಲಾಗುತ್ತದೆ.

ನಟ ಪುನೀತ್ ರಾಜಕುಮಾರ್ ಅವರು ಕಣ್ಣುಗಳ ದಾನದ ಮೂಲಕ ಸಾವಿರಾರು ಜನರಿಗೆ ಪ್ರೇರಣೆಯಾಗಿದ್ದರು. ಹೀಗಾಗಿ, ಅವರ ಪತ್ನಿ ಅಶ್ವಿನಿಗೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ರಾಯಭಾರಿ ಆಗುವಂತೆ ಆಹ್ವಾನ ನೀಡಿದ್ದಾರೆ.

ಅಂಗಾಂಗ ದಾನದ ಮೂಲಕ ಒಬ್ಬ ದಾನಿ ತನ್ನ ಸಾವಿನ ಬಳಿಕವೂ 8 ಜನರಿಗೆ, ಅಂಗಾಂಶ ದಾನದ ಮೂಲಕ 50 ಜನರಿಗೆ ನೆರವಾಗಬಹುದಾಗಿದೆ.

ರಾಜ್ಯ ಸರ್ಕಾರವು ಮಾನವ ಅಂಗಾಂಗಗಳ ಕೊರತೆಯನ್ನು ನೀಗಿಸಲು ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿದ್ದು, ನಿಮ್ಹಾನ್ಸ್ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾನವ ಅಂಗಾಂಗ ಪಡೆಯುವಿಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಉಚಿತ ಅಂಗಾಂಗ ಕಸಿ ಯೋಜನೆಯಡಿ ಈವರೆಗೆ 73 ರೋಗಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಇಲಾಖೆ ತಿಳಿಸಿದೆ.

SCROLL FOR NEXT