ರಾಜ್ಯ

ಧಾರಾಕಾರ ಮಳೆಯ ಪರಿಣಾಮ ಕೊಡಗಿನಲ್ಲಿ ಜನಜೀವನ ಅಸ್ತವ್ಯಸ್ತ

Srinivas Rao BV

ಕೊಡಗು: ಕೊಡಗು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಮುಂದುವರೆದಿದೆ. ಜಿಲೆಯಾದ್ಯಂತ ಭೂಕುಸಿತ, ವಿದ್ಯುತ್ ಲೈನ್ ಗಳಿಗೆ ಹಾನಿ, ಪ್ರವಾಹ ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಭೂ ಕುಸಿತ ಉಂಟಾಗಿ 2 ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. 

ಮೊಣ್ಣಿಗೇರಿ ಬಳಿ ಇರುವ ಎನ್ ಹೆಚ್ 275 ರಲ್ಲಿ ಭೂ ಕುಸಿತದ ಪರಿಣಾಮ ಮರ ಉರುಳಿಬಿದ್ದಿದ್ದು, ಮಂಗಳೂರು-ಮಡಿಕೇರಿ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಅಗ್ನಿಶಾಮಕದಳದ ಸಿಬ್ಬಂದಿಗಳು ಮರ ತೆರವಿಗೆ ಕ್ಷಿಪ್ರಗತಿಯ ಕ್ರಮ ಕೈಗೊಂಡರು. ಕಾವೇರಿ ನದಿ ನೀರಿನ ಹರಿವು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಭಾಗಮಂಡಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ.

ಭಾಗಮಂಡಲಕ್ಕೆ ಭೇಟಿ ನೀಡುವ ಪ್ರವಾಸಿಗರು ಪ್ರವಾಹದ ಪರಿಣಾಮ ಸಿಲುಕಿದ್ದರು. ಇನ್ನು ಕುಶಾಲನಗರದಾದ್ಯಂತ ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಆತಂಕ ಇದ್ದು, ಹಾರಂಗಿ ಜಲಾಶಯದ ಹೊರಹರಿವು ಕಡಿಮೆಯಾಗಿದೆ. ಭಾನುವಾರ ಹಾರಂಗಿ ಜಲಾಶಯದ ಕ್ರೆಸ್ಟ್ ಗೇಟ್‌ಗಳನ್ನು ತೆರೆಯಲಾಗಿದ್ದು, 25 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ಹೊರಕ್ಕೆ ಬಿಡಲಾಗಿದೆ. ಕುಶಾಲನಗರದಲ್ಲಿನ ತಗ್ಗು ಪ್ರದೇಶಗಳಲ್ಲಿರುವವರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚಿಸಲಾಗಿತ್ತು.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿನ ದೃಶ್ಯ.

ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಆತಂಕ ಇರುವ ಹಿನ್ನೆಲೆಯಲ್ಲಿ ಹೊರಹರಿವನ್ನು 8000 ಕ್ಯುಸೆಕ್ಸ್ ಗಳಿಗೆ ಇಳಿಸಿ ಬಳಿಕ ಸಂಜೆ 7 ಗಂಟೆ ವೇಳೆಗೆ 30,000 ಕ್ಯುಸೆಕ್ಸ್ ಗಳಿಗೆ ಏರಿಕೆ ಮಾಡಲಾಯಿತು. 

SCROLL FOR NEXT