ರಾಜ್ಯ

ಬೆಂಗಳೂರು ಸಿಟೀಲಿ ತಿಂಗಳಿಗೆ 40 ಸಾವಿರ ಸಂಬಳದಲ್ಲಿ ಜೀವನ ನಡೆಸಬಹುದೇ?: ಯುವತಿಯ ಸಂದೇಹಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ...

Sumana Upadhyaya

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಯುವತಿಯೊಬ್ಬರು ಪ್ರಶ್ನೆ ಕೇಳಿದ್ದರು, ತಿಂಗಳಿಗೆ 40 ಸಾವಿರ ರೂಪಾಯಿ ವೇತನದಿಂದ ಜೀವನ ನಡೆಸಲು ಸಾಧ್ಯವೇ ಎಂದು. ಇದಕ್ಕೆ ನೆಟಿಜೆನ್ ಗಳು ತರಹೇವಾರಿ ಉತ್ತರಗಳನ್ನು ನೀಡಿದ್ದು ಬೆಂಗಳೂರು ನಗರದ ಜೀವನಶೈಲಿ, ಬದುಕಲು ಬೇಕಾಗುವ ಅವಶ್ಯಕತೆಗಳ ಕುರಿತು ಸಾಕಷ್ಟು ಕಮೆಂಟ್ ಮಾಡಿದ್ದಾರೆ.

ಇಲ್ಲಿ ಯುವತಿ ಕೇಳಿದ ಪ್ರಶ್ನೆ ಒಬ್ಬ ಯುವತಿ ಸಿಂಗಲ್ ಮದರ್ ಜೊತೆ 40 ಸಾವಿರ ರೂಪಾಯಿ ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವೇ ಎಂದು ಸೋಷಿಯಲ್ ಮೀಡಿಯಾ ವೆಬ್ ಸೈಟ್ ರೆಡ್ಡಿಟ್ ನಲ್ಲಿ ಜುಲೈ 21ರಂದು ಪ್ರಶ್ನೆ ಕೇಳಿದ್ದರು. ಒಂದೇ ದಿನದಲ್ಲಿ 700ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ.

ಅದರಲ್ಲಿ ಯುವತಿ ಹೀಗೆ ಬರೆಯುತ್ತಾರೆ: ನಾನು 5 ವರ್ಷದವಳಿದ್ದಾಗಿನಿಂದ ನನ್ನ ಜೊತೆ ತಂದೆಯಿಲ್ಲ. ನನ್ನ ಊರಿನಲ್ಲಿ ಶಿಕ್ಷಣ ಮುಗಿಸಿ ಎರಡು ವರ್ಷ ಮನೆಯಿಂದಲೇ ಕೆಲಸ ಮಾಡುತ್ತಿದ್ದೆ. ಈಗ ಆಫೀಸಿನಲ್ಲಿ ಕಚೇರಿಗೆ ಬರುವಂತೆ ಹೇಳುತ್ತಿದ್ದಾರೆ. ಹೀಗಾಗಿ ನಾನು ನನ್ನ ತಾಯಿ ಜೊತೆ ಬೆಂಗಳೂರಿಗೆ ಶಿಫ್ಟ್ ಆಗಬೇಕಿದೆ. ನನ್ನ ತಾಯಿ ಈಗಷ್ಟೇ ಕಾಯಿಲೆಯಿಂದ ಔಷದೋಪಚಾರ ಮಾಡಿ ಗುಣಮುಖರಾಗಿದ್ದಾರಷ್ಟೆ.

ಕಳೆದ ಮೂರು ವರ್ಷಗಳಿಂದ ಅಷ್ಟು ಆರೋಗ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ನನಗೆ ಬೆಂಗಳೂರು ನಗರಕ್ಕೆ ಶಿಫ್ಟ್ ಆಗಲು ಭಯವಾಗುತ್ತಿದೆ. ಅಲ್ಲಿ ಪರಿಸ್ಥಿತಿ ಇನ್ನಷ್ಟು ಕಷ್ಟವಾದರೆ ಎಂಬ ಯೋಚನೆ. ಹಾಗೆಂದು ಈ ಹೊತ್ತಿನಲ್ಲಿ ನನ್ನ ವೃತ್ತಿ ದೃಷ್ಟಿಯಿಂದ ಬೆಂಗಳೂರಿಗೆ ಶಿಫ್ಟ್ ಆಗುವುದು ಕೂಡ ಮುಖ್ಯವಾಗಿದೆ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ. 

ಇದಕ್ಕೆ ನೆಟ್ಟಿಗರು ಬೆಂಗಳೂರು ಸಿಟಿಯಲ್ಲಿ ಸುಲಭವಾಗಿ ಜೀವನ ಸಾಗಿಸಲು ಏನು ಮಾಡಬಹುದು, ಅಗ್ಗದ ಆಹಾರ ಕೇಂದ್ರಗಳು, ವಸತಿ ಸೌಲಭ್ಯ ಇತ್ಯಾದಿಗಳ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಈಗ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣವಿದೆ ಎಂದು ಒಬ್ಬರು ಹೇಳಿದರೆ, ಇಲ್ಲಿ ಸಣ್ಣ ದರ್ಶಿನಿಯೊಂದರಲ್ಲಿ ನಾನು ಬೆಳಗಿನ ತಿಂಡಿ ಮತ್ತು ಮಧ್ಯಾಹ್ನ ಊಟವನ್ನು 40 ರೂಪಾಯಿಗೆ ಮಾಡುತ್ತೇನೆ, ಬೆಂಗಳೂರಿನಲ್ಲಿ ಮನೆಗೆ ಬಾಡಿಗೆ ಕಟ್ಟುವುದು ಮತ್ತು ಇತರ ಸಣ್ಣಪುಟ್ಟ ಖರ್ಚುಗಳು ಮುಖ್ಯವಾಗುತ್ತದೆ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.

ಮತ್ತೊಬ್ಬರು, ಬೆಂಗಳೂರು ಮೆಟ್ರೊ ಸಂಪರ್ಕ ಚೆನ್ನಾಗಿಲ್ಲ, ಮನೆ ಬಾಡಿಗೆಯೂ ಅಧಿಕವಾಗಿದೆ. ಮನೆಗಳ ಬಾಡಿಗೆ ಮೊತ್ತ ಇಳಿಕೆಯಾದರೆ ಉಳಿದ ವಿಚಾರಗಳನ್ನು ನಿರ್ವಹಣೆ ಮಾಡಿಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ನೀವು ಬುದ್ಧಿವಂತಿಕೆಯಿಂದ ಖರ್ಚು ಮಾಡಿದರೆ 30 ಸಾವಿರ ರೂಪಾಯಿ ಕೂಡ ಸಾಕಾಗಬಹುದು. ಆದರೆ ಹೆಚ್ಚು ಉಳಿಕೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ.

ಮತ್ತೊಬ್ಬರು, ಎಲ್ಲವೂ ನಿಮ್ಮ ಜೀವನಶೈಲಿ ಮೇಲೆ ಅವಲಂಬಿತವಾಗಿದೆ. ಬೆಂಗಳೂರಿನಲ್ಲಿ ಆದಾಯಕ್ಕೆ ನಾನಾ ಮಾರ್ಗಗಳಿವೆ. ಕೆಲವರು ಇಲ್ಲಿ ಬದುಕಿದರೆ ಇನ್ನು ಕೆಲವರಿಗೆ ಸಾಧ್ಯವಾಗುವುದಿಲ್ಲ. ನೀವು ಇಲ್ಲಿಗೆ ಶಿಫ್ಟ್ ಆದರೆ ಇದಕ್ಕಿಂತ ಉತ್ತಮ ವೇತನ ನೀಡುವ ಬೇರೆ ಹೆಚ್ಚಿನ ಅವಕಾಶಗಳು ನಿಮಗೆ ಸಿಗುವ ಸಾಧ್ಯತೆಯಿದೆ ಎಂದು ಸಲಹೆ ನೀಡಿದ್ದಾರೆ.

SCROLL FOR NEXT