ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ ಮತ್ತು ಸರ್ಕಾರವು ಅನುಮೋದಿಸಿದ ಐದು ಖಾತರಿಗಳಲ್ಲಿ ಗೃಹ ಲಕ್ಷ್ಮಿಯೂ ಒಂದಾಗಿದೆ. ಸ್ಥಿರ ಆರ್ಥಿಕ ಹಿನ್ನೆಲೆಯಿರುವ ಮಹಿಳೆಯರು ಹೆಚ್ಚಿನ ಲಾಭ ಪಡೆದರೆ ಗೃಹ ಲಕ್ಷ್ಮಿ ಯೋಜನೆಯ ಉದ್ದೇಶ ವಿಫಲವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿವಾಹಿತರು, ವಿಚ್ಛೇದಿತರು ಅಥವಾ ನಿರ್ಗತಿಕರಾಗಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಕುಟುಂಬದ ಎಲ್ಲಾ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 2,000 ರೂ ಪ್ರೋತ್ಸಾಹಧನ ನೀಡುವುದು ಗೃಹಲಕ್ಷ್ಮಿ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಯೋಜನೆಯು ಮಹಿಳಾ ಪರವಾಗಿದ್ದರೂ, ಸ್ಥಿರ ಆರ್ಥಿಕ ಹಿನ್ನೆಲೆಯಿಂದ ಬಂದವರಿಗೆ ಪ್ರೋತ್ಸಾಹ ನೀಡುವುದು ತಪ್ಪು ಹೆಜ್ಜೆಯಾಗಿದೆ. ಎಲ್ಲಾ ಮಹಿಳೆಯರು ಈ ಯೋಜನೆಗೆ ಅರ್ಹರಾಗಿದ್ದರೆ, ಕಡಿಮೆ ಆದಾಯದ ಗುಂಪುಗಳ ಅನೇಕರು ವಂಚಿತರಾಗಬಹುದು ಸಾಧನಾ ಮಹಿಳಾ ಸಂಘ ಮತ್ತು ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟ ಸೇರಿದಂತೆ ಅನೇಕ ಸಂಘಗಳೊಂದಿಗೆ ಕೆಲಸ ಮಾಡುತ್ತಿರುವ ಗೀತಾ ಮೆನನ್ ಅಭಿಪ್ರಾಯ ಪಟ್ಟಿದ್ದಾರೆ.
ಅನೇಕ ಮಹಿಳೆಯರು ಮತ್ತು ಮಕ್ಕಳ ಸಂಬಂಧಿತ ಎನ್‌ಜಿಒಗಳೊಂದಿಗೆ ಸಂಬಂಧ ಹೊಂದಿದ್ದು, ಯಾವ ಮಹಿಳೆಯರನ್ನು 'ಮನೆಯ ಮುಖ್ಯಸ್ಥ' ಎಂದು ಪರಿಗಣಿಸಬೇಕು ಎಂಬುದನ್ನು ಗುರುತಿಸುವ ಮಾನದಂಡ ಯಾವುದು ಎಂದು ಸಲಹೆಗಾರ್ತಿ ಜ್ಯೋತಿ ಬಿಜುಕುಮಾರ್ ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ, ಎಲ್ಲಾ ಮನೆಗಳಲ್ಲಿಯೂ ಪುರುಷರೇ ಹೆಚ್ಚಾಗಿ ಕುಟುಂಬ ನಿರ್ವಹಿಸುತ್ತಾರೆ ಎಂದು ವಿಶ್ಲೇಷಿಸಿದ್ದಾರೆ.
ಅನುಷ್ಠಾನದ ಮಾನದಂಡಗಳ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ ಎಂದು ತಜ್ಞರು ಹೇಳಿದ್ದಾರೆ. ಅದನ್ನು ಪರಿಹರಿಸದಿದ್ದರೆ, ಉತ್ತಮ ಉದ್ದೇಶದಿಂದ ಪ್ರಾರಂಭವಾದ ಮತ್ತೊಂದು ಯೋಜನೆಯಾಗಿ ಕೊನೆಗೊಳ್ಳುತ್ತದೆ. ಈ ಗೃಹಲಕ್ಷ್ಮಿ ಯೋಜನೆ ಹೆಚ್ಚು ದುರ್ಬಲ ಗುಂಪುಗಳನ್ನು ತಲುಪಲು ವಿಫಲವಾಗಿದೆ ಎಂದು ಅವರು ಹೇಳಿದರು. ಯೋಜನೆಗೆ ನೋಂದಣಿ ಜೂನ್ 15 ರಿಂದ ಜುಲೈ 15 ರವರೆಗೆ ಅವಕಾಶವಿರುತ್ತದೆ. ಸ್ವಾತಂತ್ರ್ಯ ದಿನದಂದು ಅಧಿಕೃತವಾಗಿ ಪ್ರಾರಂಭಿಸಲಾಗುವುದು.