ರಾಜ್ಯ

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು: ಲಕ್ಷ್ಮಿ ಹೆಬ್ಬಾಳ್ಕರ್

Sumana Upadhyaya

ಬೆಳಗಾವಿ: ಕಾಂಗ್ರೆಸ್ ‌ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಒಂದು ತಿಂಗಳಾಗುತ್ತಾ ಬರುತ್ತಿದ್ದು ಗೋಹತ್ಯೆ ನಿಷೇಧ ಕಾಯ್ದೆ (Cow Slaughter Prohibition Act) ನಿಷೇಧ ಮತ್ತು ಕಾಂಗ್ರೆಸ್ ನ 5 ಗ್ಯಾರಂಟಿ ಯೋಜನೆಗಳ ಸೂಕ್ತ ಜಾರಿಗೆ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ಅದರ ಜೊತೆಗೆ ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಬೆಳಗಾವಿಯಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ‌ಜಿಲ್ಲೆ ವಿಭಜನೆ ಆಗಬೇಕು. ಎಲ್ಲ ನಾಯಕರ ಸಹಮತ ಪಡೆದು ಜಿಲ್ಲೆ ವಿಭಜನೆ ‌ಆಗಲಿ. ಜಿಲ್ಲೆ ವಿಭಜನೆ ‌ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ಆಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಜಿಲ್ಲೆಯ ಎಲ್ಲ ನಾಯಕರ ಸಹಮತದ ಆಧಾರದ ಮೇಲೆ ಜಿಲ್ಲಾ ವಿಭಜನೆ ‌ಆಗಲಿ. ಮಾಜಿ ಸಚಿವ ‌ಪ್ರಕಾಶ ಹುಕ್ಕೇರಿ ಹೇಳುತ್ತಿದ್ದಾರೆ, ನಾನು ಹೇಳ್ತಿದ್ದೇನೆ ಎಂಬ ಕಾರಣಕ್ಕೆ ವಿಭಜನೆ ‌ಬೇಡ. ಜಿಲ್ಲಾ ವಿಭಜನೆ ‌ಸಂಬಂಧ‌ ಸರ್ಕಾರ ಮಟ್ಟದಲ್ಲಿ ಹಂತಹಂತವಾಗಿ ಚರ್ಚೆ ನಡೆಯಲಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಕ್ರಮ ಜರುಗಿಸುತ್ತೇವೆ ಎಂದರು.

ಮಹಿಳೆಯಾಗಿ ಹೇಳುತ್ತೇನೆ ಗೋಹತ್ಯೆ ನಿಷೇಧ ಅಷ್ಟೇ ಅಲ್ಲ, ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. 

ಗೃಹಜ್ಯೋತಿ ಬಗ್ಗೆ ಆತಂಕ ಬೇಡ: ಗೃಹಜ್ಯೋತಿ ಯೋಜನೆಯಿಂದ ಬಾಡಿಗೆದಾರರು ವಂಚಿತರಾಗುವ ಆತಂಕ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಯಾವುದೇ ವದಂತಿಗೆ ದಯಮಾಡಿ ಯಾರೂ ಕಿವಿಗೊಡಬೇಡಿ. ಬೆಲೆ ಏರಿಕೆಯಿಂದ ತತ್ತರಿಸಿದ ನಿಮಗೆ ಆಶಾಕಿರಣ ಮೂಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆ. ​ಮನೆ ಮಾಲೀಕರು, ಬಾಡಿಗೆದಾರರಿಗೆ ಯಾವುದೇ ಆತಂಕ ಬೇಡ. ಇನ್ನು ಅಧಿಕಾರಿಗಳು, ಮಂತ್ರಿಗಳ ಹಂತದಲ್ಲಿ ಎಲ್ಲಾ ಯೋಜನೆಗಳ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಮನೆಮಾಲೀಕರು ಹಾಗೂ ಬಾಡಿಗೆದಾರರು ಒಂದೇ ಆರ್‌ಆರ್ ನಂಬರ್ ಹೊಂದಿದ್ದರೇ ಹೇಗೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಈ ಬಗ್ಗೆ ಜಾಸ್ತಿ ಬೆಳಕನ್ನು ಚೆಲ್ಲುತ್ತಾರೆ. ಗೃಹಲಕ್ಷ್ಮೀ ಸಂಪೂರ್ಣ ಮಾಹಿತಿ ನಾನು ಮಾತನಾಡುವುದು. ತಾವು ಈ ವಿಷಯ ನನ್ನ ಗಮನಕ್ಕೆ ತಂದಿದ್ದೀರಿ ಅವರ ಜೊತೆ ಚರ್ಚೆ ಮಾಡುವೆ ಎಂದು ಹೇಳಿದರು.

SCROLL FOR NEXT