ರಾಜ್ಯ

ಸಮಸ್ಯೆ ಸರಿಪಡಿಸಿದ್ದರೆ ತಪ್ಪಿಸಬಹುದಿತ್ತು ಒಡಿಶಾ ದುರಂತ: ಫ್ರೆಬ್ರವರಿಯಲ್ಲೇ ಸಿಗ್ನಲಿಂಗ್ ಸಮಸ್ಯೆ ಬಗ್ಗೆ ರೈಲ್ವೆ ಅಧಿಕಾರಿ ಪತ್ರ!

Shilpa D

ಚಿತ್ರದುರ್ಗ: ಒಡಿಶಾದಲ್ಲಿ ನಡೆದ ಮೂರು ರೈಲುಗಳ ಅಪಘಾತದಿಂದ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ, ಒಂದು ವೇಳೆ ಸಂಬಂಧಿಸಿದವರು ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೆ ಅನಾಹುತ ತಪ್ಪಿಸಬಹುದಿತ್ತು ಎಂದು ಹೇಳಲಾಗಿದೆ.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಬೀರೂರು ಮತ್ತು ಚಿಕ್ಕಜಾಜೂರು ವಿಭಾಗದ ನಡುವೆ ಫೆಬ್ರುವರಿ 8 ರಂದು ಸಂಭವಿಸಬೇಕಾಗಿದ್ದ ಬಹು ದೊಡ್ಜ ಅನಾಹುತವನ್ನು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನ ಅಲರ್ಟ್ ಲೊಕೊ ಪೈಲಟ್ ತಪ್ಪಿಸಿದ್ದಾರೆ.

ಒಡಿಶಾ ರೈಲು ದುರಂತಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಆಗಿರುವ ಲೋಪ ಕಾರಣ ಎಂದಿದ್ದರೆ, ರೈಲ್ವೇ ಮಂಡಳಿ ಒಟ್ಟು ಘಟನೆಯ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದರ ನಡುವಲ್ಲೇ ನೈರುತ್ಯ ರೈಲ್ವೇ ವಲಯದಲ್ಲಿ ಸಿಗ್ನಲಿಂಗ್ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಗಂಭೀರ ವೈಫಲ್ಯ ಎದುರಾಗಿರುವ ಬಗ್ಗೆ ಉನ್ನತ ಅಧಿಕಾರಿಯೊಬ್ಬರು ಕಳೆದ ಫೆಬ್ರವರಿ ತಿಂಗಳಲ್ಲೇ ರೈಲ್ವೇ ಇಲಾಖೆಗೆ ಪತ್ರ ಬರೆದಿದ್ದರು ಎನ್ನುವುದು ಈಗ ಸಂಚಲನ ಮೂಡಿಸಿದೆ. ಫೆಬ್ರವರಿ 9 ರಂದು ಎಸ್‌ಡಬ್ಲ್ಯೂಆರ್‌ನ ಜನರಲ್ ಮ್ಯಾನೇಜರ್‌ಗೆ ಪತ್ರ ಬರೆದು ರೈಲ್ವೆ ಸುರಕ್ಷತಾ ವ್ಯವಸ್ಥೆಯಲ್ಲಿನ ಗಂಭೀರ ದೋಷವನ್ನು ಎತ್ತಿ ತೋರಿಸಿದ್ದಾರೆ.

ಸೌತ್ ವೆಸ್ಟರ್ನ್ ರೈಲ್ವೇ ವಲಯದ ಮುಖ್ಯ ಆಪರೇಟಿಂಗ್ ಮೆನೇಜರ್ ಆಗಿದ್ದ ಅಧಿಕಾರಿ ಫೆಬ್ರವರಿ 9ರಂದು ಪತ್ರ ಬರೆದಿದ್ದು, ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಗಂಭೀರ ತೊಂದರೆ ಎದುರಾಗಿರುವ ಬಗ್ಗೆ ಇಲಾಖೆಯ ಗಮನ ಸೆಳೆದಿದ್ದರು.

ಮೈಸೂರು ವಲಯದ ಬೀರೂರು- ಚಿಕ್ಕಜಾಜೂರು ವಿಭಾಗದ ಹೊಸದುರ್ಗ ರೈಲು ಹಳಿಯಲ್ಲಿ 2023ರ ಫೆ.8ರಂದು ಸಂಜೆ 5.45ರ ಸುಮಾರಿಗೆ ಸಿಗ್ನಲ್ ವ್ಯವಸ್ಥೆಯಲ್ಲಿ ಗಂಭೀರ ವೈಫಲ್ಯ ಉಂಟಾಗಿದ್ದರಿಂದ ಭಾರೀ ಅವಘಡ ಸ್ವಲ್ಪದರಲ್ಲಿ ತಪ್ಪಿ ಹೋಗಿತ್ತು.

ಬಿಪಿಎಸಿ ಸಿಗ್ನಲ್ ಕೌಂಟರ್ ಅನಿರೀಕ್ಷಿತವಾಗಿ ಬಂದ್ ಆಗಿದ್ದರಿಂದ ಸಮಸ್ಯೆ ಆಗಿತ್ತು. ಆ ಸಂದರ್ಭದಲ್ಲಿ ಅದೇ ಹಳಿಯಲ್ಲಿ ಬರುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಲೋಕೊ ಪೈಲಟ್ ಸಿಗ್ನಲ್ ತೊಂದರೆ ಆಗಿದ್ದನ್ನು ಮನಗಂಡು ರೈಲನ್ನು ನಿಲ್ಲಿಸಿದ್ದರು. ಇದರಿಂದ ದೊಡ್ಡ ಅವಘಡ ತಪ್ಪಿ ಹೋಗಿತ್ತು. ಆನಂತರ, ಪರಿಶೀಲನೆ ನಡೆಸಿದಾಗ ಆ ರೈಲಿಗೆ ಇನ್ನೊಂದು ಹಳಿಯಲ್ಲಿ ಹೋಗಲು ತಪ್ಪಾಗಿ ಪಿಎಲ್ ಸಿಟಿ ಕ್ಲಿಯರೆನ್ಸ್ ನೀಡಿತ್ತೆಂಬುದು ಕಂಡುಬಂದಿತ್ತು.

ರೈಲು ಒಮ್ಮೆ ಹೊರಟ ಬಳಿಕ ಈ ರೀತಿ ಸಿಗ್ನಲ್ ವ್ಯವಸ್ಥೆಯನ್ನು ಬದಲಿಸುವುದು, ಹೋಗುವ ಹಳಿಯನ್ನು ಬದಲು ಮಾಡುವುದು ದೊಡ್ಡ ಅವಘಡಕ್ಕೆ ಕಾರಣವಾಗುತ್ತದೆ. ಇದರಿಂದ ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗುತ್ತದೆ. ಈ ರೀತಿಯಾದಲ್ಲಿ ಮುಂದಕ್ಕೆ ದೊಡ್ಡ ಅಪಘಾತ ಸಂಭವಿಸಬಹುದು. ಇದು ವ್ಯವಸ್ಥೆಯೊಳಗಿನ ಗಂಭೀರ ವೈಫಲ್ಯ ಎಂದು ಚೀಫ್ ಆಪರೇಟಿಂಗ್ ಆಫೀಸರ್ ಪತ್ರ ಬರೆದು ರೈಲ್ವೇ ಇಲಾಖೆಯ ಗಮನಕ್ಕೆ ತಂದಿದ್ದರು. ಹೀಗಾಗಿ ಈ ರೀತಿ ವ್ಯತ್ಯಾಸ ಆಗಲು ಯಾರು ಕಾರಣ ಎಂಬುದನ್ನು ಪತ್ತೆ ಮಾಡಬೇಕು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ನೈರುತ್ಯ ರೈಲ್ವೇ ವಲಯದಲ್ಲಿ ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳಬೇಕು ಎಂದು ಪತ್ರ ಬರೆದಿದ್ದರು.

ಒಡಿಶಾದ ಬಾಲಾಸೋರ್ ನಲ್ಲಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ದೋಷ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿ ಲೋಪ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಉನ್ನತ ಅಧಿಕಾರಿಯ ಪತ್ರದ ಅಂಶಗಳನ್ನು ನೋಡಿದರೆ, ಈ ರೀತಿ ಆಗುವುದಕ್ಕೆ ನಿರ್ದಿಷ್ಟ ಶಕ್ತಿಗಳೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಇದರ ನಡುವಲ್ಲೇ ರೈಲ್ವೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಮೂರು ತಿಂಗಳ ಹಿಂದೆ ವ್ಯವಸ್ಥೆಯ ವೈಫಲ್ಯದ ಬಗ್ಗೆ ರೈಲ್ವೇ ಇಲಾಖೆಗೆ ಪತ್ರ ಬರೆದಿರುವುದು ಲೀಕ್ ಆಗಿದ್ದು, ಹೀಗಾಗಿ ಓಡಿಶಾ ರೈಲು ದುರಂತಕ್ಕೆ ರೈಲ್ವೇ ಇಲಾಖೆಯೊಳಗಿನ ವೈಫಲ್ಯ ಕಾರಣವೇ ಎಂಬ ಅನುಮಾನ ಕೇಳಿಬಂದಿದೆ.

ದುರಂತ ಸಂಭವಿಸಿದ ಬಹನಾಗಾ ಬಜಾರ್ ನಿಲ್ದಾಣವು ಹೊಸದುರ್ಗ ರೈಲ್ವೆ ನಿಲ್ದಾಣದಂತೆಯೇ ಲೇಔಟ್ ಹೊಂದಿದೆ. ಸಿಗ್ನಲಿಂಗ್ ವ್ಯವಸ್ಥೆಯು ಬಹುತೇಕ ಒಂದೇ ತರನಾಗಿದೆ. ರೈಲ್ವೆ ಮಂಡಳಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರಿಲೇ ಕೊಠಡಿಯನ್ನು ತೆರೆಯದೆ ಎಲೆಕ್ಟ್ರಾನಿಕ್ ಸಿಗ್ನಲ್ ನಿರ್ವಾಹಕರು ಇಂಟರ್‌ಲಾಕಿಂಗ್ ಹೇಗೆ ಬದಲಾಯಿಸಬಹುದು ಎಂಬ ಪ್ರಶ್ನೆ ಪತ್ರದಲ್ಲಿ ಎತ್ತಲಾಗಿದೆ.

SCROLL FOR NEXT