ರಾಜ್ಯ

ಮುಂಗಾರು ಆರಂಭದಲ್ಲೇ ಡಿಸಿಎಂ ಶಿವಕುಮಾರ್ ಬೆಂಗಳೂರು ರೌಂಡ್ಸ್: ರಾಜಕಾಲುವೆ, ಚರಂಡಿ, ಕೆರೆ ಪರಿಶೀಲನೆ

Sumana Upadhyaya

ಬೆಂಗಳೂರು: ರಾಜ್ಯಕ್ಕೆ ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರವೇಶವಾಗಲಿದೆ. ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದಿರುವುದು, ರಸ್ತೆಗಳಲ್ಲಿ, ಪಾದಚಾರಿ ದಾರಿಯಲ್ಲಿ ನೀರು ಪ್ರವಾಹದಂತೆ ತುಂಬಿಕೊಂಡು ಅವಾಂತರ ಸೃಷ್ಟಿಯಾಗುವುದು, ವಾಹನ ಸವಾರರಿಗೆ ವಿಪರೀತ ಸಮಸ್ಯೆಯಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರು ಕೂಡ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಮುಂಗಾರು ಆರಂಭ ಹಿನ್ನೆಲೆ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಕಾರ್ಯ ಹಮ್ಮಿಕೊಂಡರು. ಯಮಲೂರು, ದೊಮ್ಮಲೂರು, ಬೆಳ್ಳಂದೂರು, ಸರ್ಜಾಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಬಿಡಿಎ ಕೇಂದ್ರ ಕಚೇರಿಯಿಂದ ಬೆಂಗಳೂರು ನಗರ ಪ್ರದಕ್ಷಿಣೆ ಆರಂಭಿಸಿ ಬಿಎಂಟಿಸಿ ವೋಲ್ವೋ ಬಸ್​ನಲ್ಲಿ ಕಾವೇರಿ ಜಂಕ್ಷನ್, ಮೇಖ್ರಿ ಸರ್ಕಲ್, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, HAL ಏರ್​ಪೋರ್ಟ್ ರಸ್ತೆ, ಮಣಿಪಾಲ್ ಆಸ್ಪತ್ರೆ ಬಳಿ ಸಂಚರಿಸುತ್ತಿದ್ದಾರೆ.

ರಾಜಕಾಲುವೆ ಒತ್ತುವರಿಯಾದ ಸ್ಥಳಗಳಿಗೆ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ.ಯಮಲೂರಿನ ಮುಖ್ಯ ಚರಂಡಿ ಸಂಪರ್ಕಗಳನ್ನು ತಪಾಸಣೆ ನಡೆಸಿ ಮುಂಗಾರಿಗೆ ಮೊದಲೇ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಗಾಗಿ ಸಮನ್ವಯತೆ ಮೂಡಿಸಲು ಡಿಸಿಎಂ ಸಭೆ ನಡೆಸಲಿದ್ದು ಸಭೆಯಲ್ಲಿ ಬಿಎಂಆರ್​ಸಿಎಲ್, ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಇರಲಿದ್ದಾರೆ.

SCROLL FOR NEXT