ರಾಜ್ಯ

‘ರಸ್ತೆಗಳಲ್ಲಿ ಕಸ ಸುರಿಯುವ ಲಾರಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ’: ಡಿಸಿಎಂ ಡಿಕೆ ಶಿವಕುಮಾರ್

Lingaraj Badiger

ಬೆಂಗಳೂರು: ನಗರದಲ್ಲಿ ಕಟ್ಟಡ ನಿರ್ಮಾಣದ ಅವಶೇಷಗಳನ್ನು ರಸ್ತೆ ಹಾಗೂ ಖಾಲಿ ನಿವೇಶನಗಳಲ್ಲಿ ಸುರಿಯುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಸ್ತೆಗಳಲ್ಲಿ ಕಸ ಸುರಿಯುವ ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರು ಹಾಗೂ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಂಗಳವಾರ ಸೂಚಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಶಿವಕುಮಾರ್ ಅವರು, ಬೆಂಗಳೂರಿನ ಸೌಂದರ್ಯ ಹಾಳುಮಾಡುವ ಈ ಅಪಾಯವನ್ನು ಅಧಿಕಾರಿಗಳು ನಿರ್ಲಕ್ಷಿಸಬಾರದು. ಸಮಸ್ಯೆ ಬಗೆಹರಿಸಲು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಡಿಸಿಎಂ ತಿಳಿಸಿದರು.

“ಪೊಲೀಸರು ತಪ್ಪು ಮಾಡಿದ ಟ್ರಕ್ ಮತ್ತು ಟ್ರ್ಯಾಕ್ಟರ್ ಮಾಲೀಕರಿಗೆ ಭಾರಿ ದಂಡವನ್ನು ವಿಧಿಸಬೇಕು. ಅಲ್ಲದೆ, ಬೆಂಗಳೂರಿನಲ್ಲಿರುವ ಅಂತಹ ವಾಹನಗಳ ಮಾಲೀಕರು ತಮ್ಮ ಹೆಸರನ್ನು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು. 

ಉಪ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ನಗರದಲ್ಲಿ ನಿರ್ಮಾಣ ಅವಶೇಷಗಳನ್ನು ರಸ್ತೆಗಳು ಮತ್ತು ಖಾಲಿ ನಿವೇಶನಗಳಲ್ಲಿ ಸುರಿದಿದ್ದಕ್ಕಾಗಿ 300ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮತ್ತು ಟ್ರಕ್‌ಗಳ ಚಾಲಕರಿಗೆ ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿವಕುಮಾರ್ ಅವರ ಬಳಿ ಈ ವಿಚಾರವನ್ನು ತಿಳಿಸುವುದಾಗಿ ಕೆಲ ಲಾರಿ ಮಾಲೀಕರು ಬಿಬಿಎಂಪಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು. ನಿರ್ಮಾಣ ತ್ಯಾಜ್ಯವನ್ನು ತಮ್ಮ ಚಾಲಕರು ಮತ್ತು ಕ್ಲೀನರ್‌ಗಳು ರಸ್ತೆಗಳು ಮತ್ತು ಖಾಲಿ ಸೈಟ್‌ಗಳಲ್ಲಿ ಸುರಿಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಬಿಬಿಎಂಪಿ ಪ್ರಕಾರ, ಮೇ 31 ರಿಂದ ಜೂನ್ 12 ರ ನಡುವೆ 575 ಟ್ರಕ್‌ಗಳು ಮತ್ತು ಟ್ರ್ಯಾಕ್ಟರ್‌ಗಳ ಚಾಲಕರಿಗೆ ರಸ್ತೆಗಳ ಬದಿ ಕಟ್ಟಡದ ಅವಶೇಷಗಳನ್ನು ಸುರಿದಿದ್ದಕ್ಕಾಗಿ 4.10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

SCROLL FOR NEXT