ರಾಜ್ಯ

ಶಾಲಾ, ಕಾಲೇಜ್ ಗಳಲ್ಲಿ ಸಂವಿಧಾನದ ಪೀಠಿಕೆ ಓದು ಕಡ್ಡಾಯಗೊಳಿಸಿದ ಸರ್ಕಾರ

Lingaraj Badiger

ಬೆಂಗಳೂರು: ಸರ್ಕಾರಿ, ಅನುದಾನಿತ ಅಥವಾ ಖಾಸಗಿ ಸೇರಿದಂತೆ ಎಲ್ಲಾ ಶಾಲಾ-ಕಾಲೇಜುಗಳು ಸಂವಿಧಾನದ ಪೀಠಿಕೆಯನ್ನು ಪ್ರತಿದಿನ ಕಡ್ಡಾಯವಾಗಿ ಓದಬೇಕು ಮತ್ತು ಎಲ್ಲಾ ಸರ್ಕಾರಿ ಕಚೇರಿ, ಇಲಾಖೆಗಳಲ್ಲೂ ಸಂವಿಧಾನದ ಪೀಠಿಕೆಯ ಫೋಟೋ ಹಾಕಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆಯ ಭಾವಚಿತ್ರವನ್ನು ಹಾಕುವುದನ್ನು ಕಡ್ಡಾಯಗೊಳಿಸಿದೆ.

"ಸ್ವಾತಂತ್ರ್ಯ ಹೋರಾಟ, ಸಂವಿಧಾನದ ಹಿಂದಿನ ಕಲ್ಪನೆಯನ್ನು ಗಮನದಲ್ಲಿಟ್ಟುಕೊಂಡು, ಜನರು, ವಿಶೇಷವಾಗಿ ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯುವಕರು - ಅದು ಸರ್ಕಾರಿ, ಅನುದಾನಿತ ಅಥವಾ ಖಾಸಗಿಯಾಗಿರಲಿ - ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು" ಎಂದು ಸಚಿವ ಸಂಪುಟ ಸಭೆ ಬಳಿಕ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರು ಹೇಳಿದ್ದಾರೆ.

ಇದು ಯುವಜನರನ್ನು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಮತ್ತು ಎಲ್ಲಾ ಸಮುದಾಯಗಳ ನಡುವೆ ಸಹೋದರತ್ವವನ್ನು ಉತ್ತೇಜಿಸಲು ಪ್ರೇರೇಪಿಸುತ್ತದೆ ಎಂದು ಎಚ್ ಸಿ ಮಹದೇವಪ್ಪ ಅವರು ತಿಳಿಸಿದ್ದಾರೆ.

ಇಂತಹ ಶ್ರೇಷ್ಠ ಸಂವಿಧಾನವನ್ನು ಹೊಂದಿರುವ ನಮ್ಮ ಯುವಕರು ಪ್ರತಿ ದಿನ ಅದರ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು ಮತ್ತು ಎಲ್ಲಾ ಸರ್ಕಾರಿ ಹಾಗೂ ಅರೆ ಸರ್ಕಾರಿ ಕಚೇರಿಗಳಲ್ಲಿ ಅದರ ಭಾವಚಿತ್ರವನ್ನು ಪ್ರದರ್ಶಿಸಬೇಕು ಎಂದಿದ್ದಾರೆ.

ಸಂವಿಧಾನದ ಆಶಯಗಳನ್ನು, ಸಂವಿಧಾನದ ರಚನೆಯ ಮೂಲ ಉದ್ದೇಶಗಳನ್ನು ತಿಳಿಯಲು ಹಾಗೂ ಎಲ್ಲಾ ಜಾತಿ ಧರ್ಮಗಳನ್ನು ಸಮಾನವಾಗಿ ಕಾಣಲು ಅನುವು ಮಾಡಿಕೊಡಲು ಎಲ್ಲಾ ಶಾಲಾ, ಕಾಲೇಜ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಕಡ್ಡಾಯವಾಗಿ ಓದಬೇಕು ಮತ್ತು ಸರ್ಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಸಂವಿಧಾನದ ಪೀಠಿಕೆಯ ಭಾವಚಿತ್ರ ಹಾಕಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

SCROLL FOR NEXT