ಅಕ್ರಮ ಒತ್ತುವರಿ ತೆರವು ಕಾರ್ಯ 
ರಾಜ್ಯ

ಬೆಂಗಳೂರಿನ ಹಲವೆಡೆ ಸದ್ದು ಮಾಡಿದ ಬುಲ್ಡೋಜರ್: ಕೋರ್ಟ್ ನಿಂದ ಸ್ಟೇ ತಂದ ಸ್ಥಳೀಯರು, ಕಾರ್ಯಾಚರಣೆ ಸ್ಥಗಿತ

ಅಕ್ರಮ ಜಾಗ ಒತ್ತುವರಿ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೆಲಸಮ ಕಾರ್ಯಾಚರಣೆ ಇಂದು ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಸದ್ದು ಮಾಡಿದೆ.

ಬೆಂಗಳೂರು: ಅಕ್ರಮ ಜಾಗ ಒತ್ತುವರಿ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೆಲಸಮ ಕಾರ್ಯಾಚರಣೆ ಇಂದು ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಸದ್ದು ಮಾಡಿದೆ.

ಇತ್ತೀಚೆಗೆ ನಗರ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಟರ್ ಬೆಂಗಳೂರು, ವಿಷನ್ ಬೆಂಗಳೂರು ನಿರ್ಮಾಣ ಮಾಡುವ ಕ್ರಮವಾಗಿ ರಾಜಕಾಲುವೆ ಒತ್ತುವರಿದಾರರು, ಜಾಗಗಳ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ನಿನ್ನೆ ಸಭೆ ನಡೆಸಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ ಮಾಡಲು ಸೂಚನೆ ನೀಡಿದ್ದರು. 

ಇದೇ ಬೆನ್ನಲ್ಲೆ ಬಿಬಿಎಂಪಿ(BBMP) ಅಧಿಕಾರಿಗಳು ಇಂದು ಶನಿವಾರ ಬೆಂಗಳೂರಿನ ಎಂಟು ವಲಯಗಳಲ್ಲಿ ಜೆಸಿಬಿ ಮೂಲಕ ಅಕ್ರಮ ಒತ್ತುವರಿ ಕಾರ್ಯಕ್ಕೆ ಮುಂದಾಗಿದ್ದಾರೆ. 

ಇಂದು ಮಹದೇವಪುರದ ಮುನೇನಕೊಳಲು ಬಳಿ ರಾಜಕಾಲುವೆ ಮೇಲೆ ಬೃಹತ್ ಕಟ್ಟಡಗಳ ನಿರ್ಮಾಣ ಮಾಡಲಾಗಿರುವುದು ಕಂಡು ಬಂದಿದೆ. ರಾಜಕಾಲುವೆಗಳ ಮೇಲೆಯೇ ಅಕ್ರಮವಾಗಿ ಐದಾರು ಅಂತಸ್ತಿನ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಸದ್ಯ ಈ ಅಕ್ರಮ ಕಟ್ಟಡಗಳಿಗೆ ಬಿಬಿಎಂಪಿ ಮಾರ್ಕ್​ ಹಾಕಿದೆ. ಸ್ಪೈಸ್​​ ಗಾರ್ಡನ್​ನಲ್ಲಿ ತೆರವು ಮಾಡುವ ಭಾಗದಲ್ಲಿ ಮಾರ್ಕ್​ ಮಾಡಲಾಗಿದೆ. ಎಸ್​ಡಬ್ಲ್ಯೂಡಿ ಬಿಲ್ಡಿಂಗ್ ನಂಬರ್ ಮಾರ್ಕ್ ಮಾಡಿ ತೆರವು ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದಾರೆ. 

ಮಹದೇವಪುರದ ಸ್ಪೈಸ್ ಗಾರ್ಡನ್ ಬಡವಾಣೆಯಲ್ಲಿ ಮಾಲೀಕರು ರಾಜಕಾಲುವೆ ಮೇಲೆ ಅಕ್ರಮವಾಗಿ ಪಿಜಿ ಕಟ್ಟಡಗಳನ್ನ ನಿರ್ಮಾಣ ಮಾಡಿದ್ದಾರೆ. ಪಾಲಿಕೆ ಒತ್ತುವರಿ ತೆರವಿಗೆ ಮಾರ್ಕ್ ಮಾಡಿದ್ದು, ಈ ಬಗ್ಗೆ ಈ ಹಿಂದೆಯೇ ಮಾಹಿತಿ ನೀಡಿದೆ. ಆದರೆ ಪಿಜಿ ಬಾಡಿಗೆದಾರರಿಗೆ ಈ ಬಗ್ಗೆ ಮಾಲೀಕರು ಯಾವುದೇ ಸೂಚನೆ ನೀಡಿಲ್ಲ. 

ನಾಗರಿಕರ ಆಕ್ರೋಶ: ಈಗ ಪಾಲಿಕೆ ಅಧಿಕಾರಿಗಳು ತೆರವಿಗೆ ಘೋಷಣೆ ಮಾಡುತ್ತಿದ್ದಂತೆ ಬಾಡಿಗೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ನಮಗೆ ಈ ಬಗ್ಗೆ ಮಾಹಿತಿ ಇಲ್ಲ. ಹೀಗೆ ಏಕಾಏಕಿ ಖಾಲಿ ಮಾಡಿ ಎಂದಿರುವುದು ಎಷ್ಟು ಸರಿ ಎಂದು ಪಿಜಿ ಬಾಡಿಗೆದಾರರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜಕಾಲುವೆ ಒತ್ತುವರಿ ತೆರವಿಗೆ ಸ್ಥಳೀಯರಿಂದ ವಿರೋಧ: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ನ ಹೊಯ್ಸಳ ನಗರದಲ್ಲಿ ಒತ್ತುವರಿ ತೆರವು ಕಾರ್ಯ ಬೆನ್ನಲ್ಲೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ನಾವು ಈ ಸ್ಥಳದಲ್ಲಿ ವಾಸವಾಗಿದ್ದೇವೆ. ಆದರೆ ಏಕಾಏಕಿ ಮಾರ್ಕ್ ಮಾಡಿ ತೆರವು ಮಾಡುತ್ತಿದ್ದಾರೆ. ನಮ್ಮ ಬಳಿಯೂ ದಾಖಲೆಗಳಿವೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್​​: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ ಚಂದ್ರ, ಮಹದೇವಪುರ ವಲಯದಲ್ಲಿ ಹಾಗೂ ಕೆಆರ್​ ಪುರದಲ್ಲಿ ಎಲ್ಲಿ ರಾಜಕಾಲುವೆ ಇದೆ ಅಲ್ಲಿ ನೋಟಿಸ್​ ಕೊಡಲಾಗಿದೆ. ನೊಟೀಸ್ ​ನಂತರ ಕೋರ್ಟ್​ನಿಂದ ಅಂತಿಮ ಆದೇಶ ಬಂದ ಮೇಲೆ ತೆರವು ಮಾಡಲಾಗುತ್ತಿದೆ. ಐಟಿ ಪಾರ್ಕ್,​ ಶಾಪಿಂಗ್​ ಕಂಪ್ಲೆಕ್ಸ್, ಮನೆಗಳನನು ತೆರವು ಮಾಡುತ್ತೇವೆ ಎಂದರು.

ಮುನೇನಕೊಳಲು ಏರಿಯಾದಲ್ಲಿ ತೆರವು ಮಾಡಲು ಬಂದಿದ್ದೇವೆ. ಕೆಆರ್ ಪುರದ ಹೊಯ್ಸಳ ನಗರದಲ್ಲಿ ತೆರವು ಮಾಡಲು ಅಂಗಡಿಗಳು ಸಮಯಾವಕಾಶ ಕೇಳಿದ್ದಾರೆ. ಮುನೇಕೊಳಲು ವಾರದ ಹಿಂದೆ ಸಿದ್ದತೆ ನಡೆಸಿದ್ದೇವೆ. ಇಲ್ಲಿ ವಕೀಲರು ತಡೆಯಾಜ್ಞೆ ಇದೆ ಅಂತ‌ ಪತ್ರ ತೋರಿಸಿದ್ದಾರೆ. ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಕೋರ್ಟ್ ಸ್ಟೇ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಪೈಸ್ ಗಾರ್ಡ್ನನ್ ಸರ್ವೇ ನಂಬರ 34 ಇದೆ ಎಂದು ಹೇಳುತ್ತಿದ್ದಾರೆ. ಕೆಲ ಗೊಂದಲಗಳಿದೆ, ಅದನ್ನು ಬಗೆಹರಿಸುತ್ತಿದ್ದೇವೆ. 22 ಕಡೆ ಮಾರ್ಕ್ ಮಾಡಿದ್ದೆವು, ಗೊಂದಲ ಬಗೆಹರಿದ ನಂತರ ತೆರವು ಮಾಡುತ್ತೇವೆ ಎಂದು ಮಹದೇವಪುರ ಸಿಇ ಲೋಕೇಶ್ ತಿಳಿಸಿದ್ದಾರೆ.

ತಡೆಯಾಜ್ಞೆ ತಂದ ನಿವಾಸಿಗಳು, ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತ: ಬಿಬಿಎಂಪಿ ಸಿಬ್ಬಂದಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಈಗ ಸ್ಥಗಿತಗೊಳಿಸಿದ್ದಾರೆ. ಒತ್ತುವರಿ ತೆರವು ಸಂಬಂಧ ಬೆಂಗಳೂರು ಉತ್ತರ ತಹಶೀಲ್ದಾರ್ ನೋಟಿಸ್​​ಗೆ ನಿವಾಸಿಗಳು ಕೋರ್ಟ್​ನಿಂದ ತಡೆ ತಂದಿದ್ದು ಈ ಬಗ್ಗೆ ತಹಶೀಲ್ದಾರ್ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಸದ್ಯ ವಿಷಯ ತಿಳಿದಿದ್ದು ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ತಡೆಯಾಜ್ಞೆ ಬಗ್ಗೆ ಪರಿಶೀಲಿಸಿ ಸೋಮವಾರ ತೆರವು ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT