ರಾಜ್ಯ

3 ತಿಂಗಳಲ್ಲಿ ಸಂಚಾರಿ ಸಮಸ್ಯೆ ಮುಕ್ತ ನಗರ ಗುರಿ, ಡ್ರೋಣ್ ಬಳಕೆಗೆ ಸರ್ಕಾರ ಮುಂದು!

Manjula VN

ಬೆಂಗಳೂರು: ಸಂಚಾರ ವಿಭಾಗದ ಪೊಲೀಸರಿಗೆ 3 ತಿಂಗಳ ಅವಧಿಯಲ್ಲಿ ಬೆಂಗಳೂರು ನಗರವನ್ನು ಸಂಚಾರ ಸಮಸ್ಯೆ ಮುಕ್ತವಾಗಿರುವ ಗುರಿಯನ್ನು ನೀಡಲಾಗಿದ್ದು, ಇನ್ನು ಮುಂದೆ ರಸ್ತೆಗಳಲ್ಲಿ ಡ್ರೋಣ್ ಕ್ಯಾಮೆರಾಗಳನ್ನು ಬಳಸಿ ಸಂಚಾರ ದಟ್ಟಣೆ ತಗ್ಗಿಸಲು ಸರ್ಕಾರ ಮುಂದಾಗಿದೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ, ಡ್ರಗ್ಸ್ ಹಾವಳಿ, ರೌಡಿ ಚಟುವಟಿಕೆಗಳ ನಿವಾರಣೆ ಕುರಿತು ವಿಸ್ತೃತ ಚರ್ಚೆ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮೂರು ತಿಂಗಳಲ್ಲಿ ಬೆಂಗಳೂರು ನಗರವನ್ನು ಸಂಚಾರ ಮುಕ್ತವಾಗಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪ್ರತಿ ದಿನ ಪೀಕ್ ಅವರ್ ನಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಎರಡು ಗಂಟೆಗಳು ಡಿಸಿಪಿ ಆದಿಯಾಗಿ ಸಂಚಾರ ವಿಭಾಗದ ಎಲ್ಲಾ ಪೊಲೀಸರು ರಸ್ತೆಯಲ್ಲಿ ನಿಂತು ಸಂಚಾರ ನಿರ್ವಹಣೆ ಮಾಡಬೇಕು. ಸಂಚಾರ ದಟ್ಟಣ ಉಂಟಾದರೆ ಡಿಸಿಪಿ ಮತ್ತು ಎಸಿಪಿ ಅವರನ್ನು ಕೂಡ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ವಾಹನಗಳ ಟೋಯಿಂಗ್ ಅನ್ನು ಪುನರಾರಂಭಿಸುವ ಯಾವುದೇ ಚಿಂತನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

"ನಾನು ಈ ಹಿಂದೆ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಾಕಷ್ಟು ಅನುಭವವಿದೆ, ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿರಬೇಕು ಮತ್ತು ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮವಾಗಿ ವರ್ತಿಸಬೇಕು, ಪೊಲೀಸ್ ಅಧಿಕಾರಿಗಳು ಪ್ರಭಾವ ಅಥವಾ ಒತ್ತಡಕ್ಕೆ ಮಣಿಯಬಾರದು. ಸಾರ್ವಜನಿಕರ ಮೇಲೆ ಪರಿಣಾಮ ಬೀರುವ ರೌಡಿ ಮತ್ತು ರಿಯಲ್ ಎಸ್ಟೇಟ್ ಸಮಸ್ಯೆಗಳು. ನಿಯಂತ್ರಿಸಬೇಕು’ ಎಂದು ತಿಳಿಸಿದರು.

ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್'ಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗತೊಡಗಿವೆ. ನಗರದಲ್ಲಿನ ಡ್ರಗ್ಸ್ ದಂಧೆ ಪ್ರಕರಣಗಳಲ್ಲಿ ತೊಡಗಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಲಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದ ಸುಮಾರು 106 ವಿದೇಶಿ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

SCROLL FOR NEXT