ರಾಜ್ಯ

ಕೊಪ್ಪಳ: ಕಲುಷಿತ ನೀರು ಸೇವನೆಯಿಂದ ಮೂವರು ಸಾವು ಪ್ರಕರಣ; ಇಬ್ಬರು ಪಿಡಿಒಗಳ ಅಮಾನತು

Ramyashree GN

ಕೊಪ್ಪಳ: ಕಲುಷಿತ ನೀರು ಸೇವಿಸಿ 10 ವರ್ಷದ ಬಾಲಕಿ ಸೇರಿದಂತೆ ಮೂವರು ಸಾವಿಗೀಡಾದ ಮತ್ತು ನೂರಾರು ಜನರು ಅಸ್ವಸ್ಥರಾದ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಬಿಜಕಲ್ ಮತ್ತು ಬಸರಿಹಾಳ್ ಗ್ರಾಮಗಳ ಇಬ್ಬರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಅಮಾನತುಗೊಳಿಸಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ಆಯುಕ್ತೆ ಪ್ರಿಯಾಂಕಾ ಮೇರಿ, ಪಿಡಿಒಗಳನ್ನು ಅಮಾನತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.

ಬಸರಿಹಾಳ ಪಂಚಾಯಿತಿ ಪಿಡಿಒಗಳಾದ ರವೀಂದ್ರ ಕುಲಕರ್ಣಿ ಹಾಗೂ ಬಿಜಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೇಶ ಅವರನ್ನು ಇಲಾಖಾ ವಿಚಾರಣೆ ಬಾಕಿ ಉಳಿದಿರುವು ಕಾರಣ ಅಮಾನತುಗೊಳಿಸಲಾಗಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಜೂನ್ ಮೊದಲ ವಾರದಲ್ಲಿ ಕಲುಷಿತ ನೀರು ಸೇವನೆಯಿಂದ 10 ವರ್ಷದ ಬಾಲಕಿ ಸೇರಿದಂತೆ ಮೂವರು ಸಾವಿಗೀಡಾಗಿದ್ದರು. ಮೃತ ಬಾಲಕಿಯನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ನಿವಾಸಿ ನಿರ್ಮಲಾ ಈರಪ್ಪ ಬೆಳಗಲ್ ಎಂದು ಗುರುತಿಸಲಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಳು.

40ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಜೂನ್ 5 ರಂದು ಜಿಲ್ಲೆಯ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಂಬತ್ತು ತಿಂಗಳ ಹಸುಳೆ ಹಾಗೂ 60 ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಡಿವ ನೀರಿಗೆ ಕೊಳಚೆ ನೀರು ಸೇರಿಕೊಂಡು ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಸರಿಹಾಳ ಗ್ರಾಮದ ಶಾಲೆಗೆ ಅಧಿಕಾರಿಗಳು ಮೂರು ದಿನ ರಜೆ ಘೋಷಿಸಿದ್ದರು.

SCROLL FOR NEXT