ರಾಜ್ಯ

ಹಾಸನ: ಅರಕಲಗೂಡಿನ ಎಸ್‌ಬಿಐ ಶಾಖೆಯಲ್ಲಿ ಅಡವಿಟ್ಟಿದ್ದ ಚಿನ್ನ ಕಳ್ಳತನ, ಅಟೆಂಡರ್ ಬಂಧನ!

Ramyashree GN

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿಯ ಎಸ್‌ಬಿಐ ಶಾಖೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಗ್ರಾಹಕರು ಅಡಮಾನವಿಟ್ಟ ₹90 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವ ಆರೋಪ ಕೇಳಿಬಂದಿದೆ.

ಕಳೆದ 10 ವರ್ಷಗಳಿಂದ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಲವ (39) ವಿರುದ್ಧ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಹೊರಗುತ್ತಿಗೆ ಏಜೆನ್ಸಿ ಮೂಲಕ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಆರೋಪಿ ಗ್ರಾಹಕರು ಸಾಲಕ್ಕಾಗಿ ಅಡಮಾನವಿಟ್ಟಿದ್ದ ಚಿನ್ನಾಭರಣಗಳನ್ನು ನಕಲಿ ಚಿನ್ನದಿಂದ ಬದಲಾಯಿಸುತ್ತಿದ್ದನು. ಕಳೆದ ಒಂದು ವರ್ಷದಿಂದ ಇದೇ ನಡೆದಿದ್ದು, ಅಧಿಕಾರಿಗಳು ಇತ್ತೀಚೆಗೆ ಇದನ್ನು ಗಮನಿಸಿದ್ದಾರೆ.

ಜೂನ್ 14ರಂದು ಹಾಸನದ ಎಸ್‌ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಅನುರಾಧಾ ಟಿ. ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಕೊಣನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಡಮಾನವಿಟ್ಟ ಚಿನ್ನಾಭರಣ ತುಂಬಿದ ಪೊಟ್ಟಣಗಳನ್ನು ಸೇಫ್ಟಿ ಲಾಕರ್‌ಗಳಲ್ಲಿ ಇಡುವ ಕೆಲಸವನ್ನು ಆರೋಪಿಗೆ ವಹಿಸಲಾಗಿತ್ತು ಎಂದು ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ವೇಳೆ ಆತ ನಿಜವಾದ ಚಿನ್ನವನ್ನು ಹೊರತೆಗೆದು ನಕಲಿ ಚಿನ್ನವನ್ನು ಅದರಲ್ಲಿ ಹಾಕಿ ಇಡುತ್ತಿದ್ದನು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಶಂಕರ್ ತಿಳಿಸಿದ್ದಾರೆ.

SCROLL FOR NEXT