ರಾಜ್ಯ

ಮುಂಗಾರು ಆರಂಭ: ಕರ್ನಾಟಕದ ಹಲವು ಭಾಗಗಳಲ್ಲಿ ಉತ್ತಮ ಮಳೆ, ಮೋಡಗಳ ದಿಟ್ಟಿಸುತ್ತಿದ್ದ ರೈತರಲ್ಲಿ ಹರ್ಷ

Ramyashree GN

ಬೆಂಗಳೂರು: ವಿಳಂಬದ ನಂತರ ಕೊನೆಗೂ ಮುಂಗಾರು ಆರಂಭವಾಗಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಹಲವು ಭಾಗಗಳು ಮತ್ತು ಮಲೆನಾಡು ಭಾಗಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಭರವಸೆ ಮೂಡಿಸಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಲವು ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಮಳೆಯಾಗಿದೆ. ದಕ್ಷಿಣ ಕಾಶಿ ಎಂದೂ ಕರೆಯಲ್ಪಡುವ ಸೋಮೇಶ್ವರನ ಆವಾಸಸ್ಥಾನವಾದ ಸೊಗಲದಲ್ಲಿನ ಜಲಪಾತವು ಈ ಪ್ರದೇಶದಲ್ಲಿ ಭಾರಿ ಮಳೆಯ ನಂತರ ಜೀವಂತವಾಗಿದೆ. ಮುರಗೋಡು, ಕರಿಮನಿ, ಹೊಸೂರಿನಲ್ಲೂ ಉತ್ತಮ ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಈ ಬಾರಿಯ ಮೊದಲ ಮಳೆಯಾಗಿದೆ. ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ರೈತರ ಮೊಗದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಸುರಿದ ಮಳೆ ಸಂತಸ ತಂದಿದೆ.

ಗುರುವಾರ ಎಡೆಬಿಡದೆ ಸುರಿದ ಮಳೆಗೆ ಹರಪನಹಳ್ಳಿ ತಾಲ್ಲೂಕಿನ ತೇಗದ ಹಳ್ಳ ಸೇರಿದಂತೆ ಹಲವು ಹೊಳೆಗಳು ಪೂರ್ಣ ಪ್ರಮಾಣದಲ್ಲಿ ತುಂಬಿ ಹರಿಯುತ್ತಿವೆ. ಹೊಳೆಗಳು ತುಂಬಿ ತುಳುಕುತ್ತಿದ್ದು, ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಕೃಷಿ ಭೂಮಿ ಜಲಾವೃತಗೊಂಡಿದೆ.

ಗದಗ ಮತ್ತು ದಾವಣಗೆರೆ ಜಿಲ್ಲೆಗಳ ಕೆಲವೆಡೆಯೂ ಸಾಧಾರಣ ಮಳೆಯಾಗಿದೆ.

ತುಮಕೂರು ಜಿಲ್ಲೆಯ ಬೋರನಕಣಿವೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 80.4 ಮಿಮೀ ಮಳೆ ದಾಖಲಾಗಿದೆ. ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಕೊರಟಗೆರೆ ತಾಲೂಕುಗಳಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದೆ.

ಶ್ರೀನಿವಾಸಪುರ, ಗೌರಿಬಿದನೂರು ಸೇರಿದಂತೆ ಅವಿಭಜಿತ ಕೋಲಾರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ತುಂತುರು ಮಳೆಯಾಗಿದೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಮತ್ತು ಬಲ್ಲಮಾವಟಿಯಲ್ಲಿ ಗುಡುಗು ಸಹಿತ ಮಳೆಯಾಗಿದ್ದರೆ, ಗುಡ್ಡಗಾಡು ಜಿಲ್ಲೆಯ ಇತರ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ.

SCROLL FOR NEXT