ರಾಜ್ಯ

ಬಿಬಿಎಂಪಿ ವಾರ್ಡ್‌ ಮರು ವಿಂಗಡಣೆಗೆ ಮತ್ತೊಮ್ಮೆ ಆಯೋಗ ರಚನೆ, ಚುನಾವಣೆ ಮತ್ತಷ್ಟು ವಿಳಂಬ!

Manjula VN

ಬೆಂಗಳೂರು: ಬೆಂಗಳೂರಿನ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ ಮರುವಿಂಗಡಣೆಗೆ ರಾಜ್ಯ ಸರ್ಕಾರದಿಂದ ಆಯೋಗವನ್ನು ರಚಿಸಿ ಆದೇಶ ಹೊರಡಿಸಿದೆ. 12 ವಾರಗಳಲ್ಲಿ ವಾರ್ಡ್‌ ಮರುವಿಂಗಡಣಾ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ.

2020ರ ಸೆಪ್ಟಂಬರ್‌ನಲ್ಲಿ ಬಿಬಿಎಂಪಿ ಸದಸ್ಯರ (ಕಾರ್ಪೋರೇಟರ್‌ಗಳ) ಅಧಿಕಾರ ಪೂರ್ಣಗೊಂಡಿದೆ. ಚುನಾವಣೆ ನಡೆಸುವ ದೃಷ್ಟಿಯಿಂದ 198 ವಾರ್ಡ್‌ಗಳಿಗೆ ವಾರ್ಡ್‌ ಪುನರ್‌ವಿಂಗಡಣೆ ಮಾಡಲಾಗಿತ್ತು. ನಂತರ, ಆಡಳಿತಾತ್ಮಕ ದೃಷ್ಟಿಕೋನದಿಂದ ಬಿಬಿಎಂಪಿ-2020 ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಈ ವೇಳೆ ಬಿಬಿಎಂಪಿ ವ್ಯಾಪ್ತಿಯನ್ನು 243 ವಾರ್ಡ್‌ಗಳನ್ನಾಗಿ ಮಾಡಿ ರಚನೆ ಮಾಡಲಾಯಿತು. ನಂತರ ಚುನಾವಣೆ ದೃಷ್ಟಿಯಿಂದ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಯಿತು. ಆದರೆ, ವಾರ್ಡ್‌ ಮರುವಿಂಗಡಣೆ ಸೂಕ್ತವಾಗಿಲ್ಲ ಎಂದು ಮಾಜಿ ಪಾಲಿಕೆ ಸದಸ್ಯರು ಕೋರ್ಟ್‌ ಮೊರೆ ಹೋಗಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್‌, ತಪ್ಪುಗಳನ್ನು ಸರಿಪಡಿಸಿ 12 ವಾರಗಳಲ್ಲಿ ಹೊಸದಾಗಿ ವಾರ್ಡ್‌ಗಳ ಮರುವಿಂಗಡಣೆ ಮಾಡುವಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಮತ್ತೊಮ್ಮೆ (ಮೂರನೇ ಬಾರಿಗೆ) ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಗೆ ಆಯೋಗವನ್ನು ರಚಿಸಿ ಆದೇಶ ಹೊರಡಿಸಿದೆ.

ಹೈಕೋರ್ಟ್​ ಸೂಚನೆಯಂತೆ ವಾರ್ಡ್​ ಪುನರ್​ ವಿಂಗಡನೆಯ ಹಳೆ ಅಧಿಸೂಚನೆಯನ್ನ ಕೈಬಿಟ್ಟ ರಾಜ್ಯ ಸರ್ಕಾರ, ಹೊಸದಾಗಿ ವಾರ್ಡ್​ಗಳ ಡಿಲಿಮಿಟೇಶನ್​ಗೆ ಆಯೋಗ ರಚಿಸಿ ಆದೇಶ ಹೊರಡಿಸಿದೆ.

ಹೈಕೋರ್ಟ್​ ಆದೇಶದಂತೆ 12 ವಾರಗಳಲ್ಲಿ ವಾರ್ಡ್​ಗಳ ಪುನರ್​ ವಿಂಡಗನೆ ಮಾಡಲು ನೂತನ ಆಯೋಗಕ್ಕೆ ಸೂಚನೆ ನೀಡಿದೆ.

ಸರ್ಕಾರ ರಚಿಸಿದ ಪುನರ್ ಆಯೋಗದಲ್ಲಿ  ಬಿಬಿಎಂಪಿ ಮುಖ್ಯ ಆಯುಕ್ತ ರು ಅಧ್ಯಕ್ಷರಾಗಿದ್ದಾರೆ. ಜೊತೆಗೆ, ಬಿಡಿಎ ಆಯುಕ್ತರು, ಬೆಂಗಳೂರು ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಕಂದಾಯ ವಿಭಾಗದ ಆಯುಕ್ತರನ್ನು ಸದಸ್ಯರನ್ನಾಗಿ ಮಾಡಲಾಗಿದೆ.

SCROLL FOR NEXT