ಬೆಂಗಳೂರು: ಸಂಗಾತಿ ಮೇಲಿನ ಕೋಪಕ್ಕೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಿನಿಮೀಯ ರೀತಿಯಲ್ಲಿ ಮಗುವನ್ನು ಅಪಹರಿಸಿದ್ದ ತಂದೆಯನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಮೂಲದ ಉದ್ಯಮಿ ಹರಿಕೃಷ್ಣ ಬಂಧಿತ ಆರೋಪಿಯಾಗಿದ್ದಾನೆ. ಈತ ಬಳ್ಳಾರಿಯಲ್ಲಿ ಸ್ಟೀಲ್ ಪ್ಲಾಂಟ್ ನಡೆಸುತ್ತಿದ್ದ. 2015ರಲ್ಲಿ ಕಂಪನಿಗೆ ಪಶ್ಚಿಮ ಬಂಗಾಳದ ಸಿಲ್ವಿಯಾ ರಾಮೇಶ್ವರಿ ಎಂಬಾಕೆ ನೌಕರಿಗೆ ಸೇರಿದ್ದರು. ಇಂತರ ರಾಮೇಶ್ವರಿ ಜೊತೆಗೆ ಹರಿಕೃಷ್ಮ ಲಿವಿಂಗ್ ಟು ಗೆದರ್ ಸಂಬಂಧದಲ್ಲಿದ್ದರು. 2018ರಲ್ಲಿ ರಾಮೇಶ್ವರಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ತಂದೆಯ ಹತ್ಯೆ ಪ್ರಕರಣದಲ್ಲಿ ಹರಿಕೃಷ್ಣ ಬಂಧನಕ್ಕೊಳಗಾದ ಬಳಿಕ ರಾಮೇಶ್ವರಿ ಈತನಿಂದ ದೂರಾಗಿದ್ದಳು. ಬಳಿಕ ಮಗುವಿನ ವಿಚಾರವಾಗಿ ಹರಿಕೃಷ್ಣ ನ್ಯಾಯಾಲಯದ ಮೆಟ್ಟಿಲೇರಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ ತಾಯಿ ಮಗುವನ್ನು ಕರೆದೊಯ್ಯಬಹುದು ಎಂದು ಹೇಳಿ, ಮಗುವನ್ನು ತಾಯಿಯ ಸುಪರ್ದಿಗೆ ನೀಡಿತ್ತು.
ಇದನ್ನೂ ಓದಿ: ಪತಿ ಹತ್ಯೆ: ಮಹಿಳೆ, ಪ್ರಿಯಕರ ಸೇರಿ ನಾಲ್ವರ ಬಂಧನ
ರಾಮೇಶ್ವರಿ ತನ್ನ ಮಗನೊಂದಿಗೆ ಅಮೃತಹಳ್ಳಿಯ ತಲಕಾವೇರಿ ಲೇಔಟ್‌ನಲ್ಲಿ ವಾಸಿಸುತ್ತಿದ್ದು, ಮಗುವನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಈ ವೇಳೆ ಐವರು ಮಹಿಳೆಯರು ವಾಹನವನ್ನು ಅಡ್ಡಗಟ್ಟಿದ್ದಾರೆ. ಇದ್ದಕ್ಕಿದ್ದಂತೆ ವಾಹನ ಅಡ್ಡಗಟ್ಟಿದ ಪರಿಣಾಮ ರಾಮೇಶ್ವರಿ ಹಾಗೂ ಮಗು ಕೆಳಗೆ ಬಿದ್ದಿದೆ, ಕೂಡಲೇ ಸ್ಥಳಕ್ಕೆ ಬಂದಿರುವ ಹರಿಕೃಷ್ಣ ಮಗುವನ್ನು ಕಾರಿನಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾನೆ.
ಬಳಿಕ ರಾಮೇಶ್ವರಿ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಸಂಬಂಧ ವಾಹನವನ್ನು ಅಡ್ಡಗಟ್ಟಿದ್ದ ಮಹಿಳೆಯರು, ಓರ್ವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಈ ವೇಳೆ ಹರಿಕೃಷ್ಣ ಪರಾರಿಯಾಗಿದ್ದಾನೆ. ಘಟನೆ ನಡೆದ 6 ದಿನಗಳ ಬಳಿಕ ಗೋವಾದಲ್ಲಿ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮಗು ಸುರಕ್ಷಿತವಾಗಿದ್ದು, ತಾಯಿಯ ಮಡಿಲು ಸೇರಿದ್ದಾರೆ.
2019 ರಲ್ಲಿ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹರಿಕೃಷ್ಣ ಅವರ ತಂದೆ ಮಾಧವ್ ಸಿಂಗನಮಾಲ ಅವರನ್ನು ಹತ್ಯೆ ಮಾಡಲಾಗಿತ್ತು. 300 ಕೋಟಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಹರಿಕೃಷ್ಣ ತನ್ನ ತಂದೆಯನ್ನು ಮುಗಿಸಲು ಸುಪಾರಿ ಕಿಲ್ಲರ್‌ಗಳನ್ನು ನೇಮಿಸಿದ್ದ ಎಂಬುದು ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಹರಿಕೃಷ್ಣ ಬಂಧನಕ್ಕೊಳಗಾಗಿದ್ದ. ನಂತರ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಘಟನೆ ಬಳಿಕ ರಾಮೇಶ್ವರಿಯವರು ಈತನಿಂದ ದೂರಾಗಿದ್ದರು.