ರಾಜ್ಯ

ಜಯದೇವ ಹೃದ್ರೋಗ ಸಂಸ್ಥೆ, ಅದಿತಿ ಅಶೋಕ್, ನಿತಿನ್ ಕಾಮತ್ ಗೆ ಕೆಂಪೇಗೌಡ ಪ್ರಶಸ್ತಿ

Lingaraj Badiger

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಪ್ರತಿ ವರ್ಷ ರಾಜ್ಯ ಸರ್ಕಾರ ನೀಡುವ ಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಜಯದೇವ ಹೃದ್ರೋಗ ಸಂಸ್ಥೆ, ಯುವ ಉದ್ಯಮಿ ನಿತೀನ್ ಕಾಮತ್ ಹಾಗೂ ದೇಶದ ಖ್ಯಾತ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಇಂದು ಕುಮಾರಕೃಪಾ ಹಳೇ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಕೆಂಪೇಗೌಡ ಪ್ರಶಸ್ತಿ ಪ್ರಕಟಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕೆಂಪೇಗೌಡ ಪ್ರಶಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಸಮಿತಿ ರಚನೆ ಮಾಡಿದ್ದೆವು. ಅದರಂತೆ ಈ ಬಾರಿ ಒಂದು ಸಂಸ್ಥೆ ಮತ್ತು ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಈ ಬಾರಿ ಜಯದೇವ ಹೃದ್ರೋಗ ಸಂಸ್ಥೆಯನ್ನು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ ಬೆಂಗಳೂರಿನ ಯುವಕ ಜಿರೋಧ ಸಂಸ್ಥಾಪಕ ನಿತಿನ್ ಕಾಮತ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಮಹಿಳೆಯರಿಗೂ ಪ್ರಶಸ್ತಿ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಕ್ರೀಡಾಪಟು ಅದಿತಿ ಅಶೋಕ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಚರ್ಚೆ ಮಾಡಿ ಮೂವರು ಸಾಧಕರ ಆಯ್ಕೆ ಮಾಡಿದೆ. ಜೂನ್ 27 ರಂದು ನಡೆಯಲಿರುವ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಸಿಎಂ ತಿಳಿಸಿದ್ದಾರೆ.

ಈ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು, ಕುದುರೆ ಮೇಲೆ ಕುಳಿತಿರುವ ಕೆಂಪೇಗೌಡರ ಪ್ರತಿಮೆಯನ್ನು ಒಳಗೊಂಡಿದೆ.

SCROLL FOR NEXT