ರಾಜ್ಯ

ವಿಧಾನಸಭಾ ಚುನಾವಣೆ 2023: ಗಡಿ ಗ್ರಾಮಗಳಿಗೆ ವಿಶೇಷ ಪ್ಯಾಕೇಜ್; ಸಿಎಂ ಬೊಮ್ಮಾಯಿ ಘೋಷಣೆ

Manjula VN

ಮೈಸೂರು: ವಿಧಾನಸಭಾ ಚುನಾವಣೆಗೂ ಮುನ್ನ ಗಡಿ ಜಿಲ್ಲೆ ಚಾಮರಾಜನಗರದ ಜನರ ಮನಗೆಲ್ಲುವ ಗುರಿಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಗಡಿ ಗ್ರಾಮಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಲಿದೆ ಎಂದು ಬುಧವಾರ ಹೇಳಿದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದೆ. ಈ ಸಮಸ್ಯೆಗಳ ಬಗೆಹರಿಸಲು ಅನುದಾನ ಮಂಜೂರು ಮಾಡುವ ಮೂಲಕ ಅವುಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.

ಭೂರಹಿತ ಬುಡಕಟ್ಟು ಕುಟುಂಬಗಳಿಗೆ ಭೂಮಿ ನೀಡಲು ಸರ್ಕಾರ ಬದ್ಧವಾಗಿದೆ, ಅರಣ್ಯ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಶಿಫಾರಸು ಮಾಡುವುದು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಲು ಸರ್ಕಾರ ಬದ್ಧವಾಗಿದೆ. ಗಡಿ ಗ್ರಾಮಗಳ ಸ್ವಸಹಾಯ ಸಂಘಗಳು ಸ್ವಯಂ ಪ್ರೇರಿತರಾಗಿ ಗುಡಿ ಕೈಗಾರಿಕೆ ಸ್ಥಾಪಿಸಿದರೆ ಸರಕಾರ ಅವರಿಗೆ 5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ಬಳಿಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇಷ್ಟು ವರ್ಷ ಆದಿವಾಸಿಗಳನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ, ಆ ಪಕ್ಷ ಭ್ರಷ್ಟಾಚಾರದ ಗಂಗೋತ್ರಿಯಾಗಿದೆ ಎಂದರು.

40 ವರ್ಷಗಳ ಸುದೀರ್ಘ ಹೋರಾಟದ ನಂತರ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಹೆಚ್ಚಿಸಲಾಯಿತು, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಇದೇ ವೇಳೆ ಮೀಸಲಾತಿಗೆ ಆಗ್ರಹಿಸಿ ಬೇಡಗಂಪಣ ಸಮುದಾಯದ ಮನವಿಯನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗುವುದು ಎಂದ ಅವರು, ಹನೂರು ಕ್ಷೇತ್ರದ ಚಂಗಡಿ ಅರಣ್ಯದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲು ಹಣ ಬಿಡುಗಡೆ ಮಾಡಲಾಗುವುದು ಎಂದರು.

SCROLL FOR NEXT