ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಕಚೇರಿ ಮತ್ತು ನಿವಾಸದಲ್ಲಿ ಸಿಕ್ಕಿರುವ ರಾಶಿರಾಶಿ ಹಣ ಬಲಚಿತ್ರದಲ್ಲಿ ಪ್ರಶಾಂತ್ ಮಾಡಾಳ್ 
ರಾಜ್ಯ

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಕಚೇರಿ-ನಿವಾಸದಿಂದ 6 ಕೋಟಿ ರೂ. ನಗದು ವಶ: ಸಿಎಂ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ BWSSB ಮುಖ್ಯ ಲೆಕ್ಕಾಧಿಕಾರಿ ಮಾಡಾಳ್ ಪ್ರಶಾಂತ್‌ ಕಚೇರಿಯಲ್ಲಿ ನಿನ್ನೆ ಮಾರ್ಚ್ 2 ಗುರುವಾರ ಸಾಯಂಕಾಲದಿಂದ ಇಂದು ಶುಕ್ರವಾರ ಬೆಳಗಿನ ಜಾವದವರೆಗೂ ಲೋಕಾಯುಕ್ತ ದಾಳಿ ಮುಂದುವರಿದಿದ್ದು ಈ ವೇಳೆ ರಾಶಿ ರಾಶಿ ಹಣ ಪತ್ತೆಯಾಗಿದೆ. 

ಬೆಂಗಳೂರು: ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ BWSSB ಮುಖ್ಯ ಲೆಕ್ಕಾಧಿಕಾರಿ ಮಾಡಾಳ್ ಪ್ರಶಾಂತ್‌ ಕಚೇರಿಯಲ್ಲಿ ನಿನ್ನೆ ಮಾರ್ಚ್ 2 ಗುರುವಾರ ಸಾಯಂಕಾಲದಿಂದ ಇಂದು ಶುಕ್ರವಾರ ಬೆಳಗಿನ ಜಾವದವರೆಗೂ ಲೋಕಾಯುಕ್ತ ದಾಳಿ ಮುಂದುವರಿದಿದ್ದು ಈ ವೇಳೆ ರಾಶಿ ರಾಶಿ ಹಣ ಪತ್ತೆಯಾಗಿದೆ. 

ಬೆಂಗಳೂರಿನ ಕ್ರೆಸೆಂಟ್​ ರಸ್ತೆಯಲ್ಲಿರುವ ಮಾಡಾಳು ಪ್ರಶಾಂತ್ ಅವರ ಕಚೇರಿಯಲ್ಲಿ ನಿನ್ನೆ ಸಂಜೆ 6.30ಕ್ಕೆ ಪ್ರಶಾಂತ್ ಅವರು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ಮಾಡಲಾಗಿತ್ತು. ಬಳಿಕ ಕಚೇರಿಯಲ್ಲಿ ಮತ್ತು ಅವರ ಮನೆಯಲ್ಲಿ ಶೋಧ ಕಾರ್ಯ ಮುಂದುವರಿಯಿತು. ಅದು ಇಂದು ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಈ ವೇಳೆ ಸಮಗ್ರವಾಗಿ ಶೋಧ ನಡೆಸಿದಾಗ ಅವರ ಕಚೇರಿಯಲ್ಲಿ ದಾಖಲೆ ಹಾಗೂ ಸುಮಾರು 6 ಕೋಟಿ ರೂಪಾಯಿ ನಗದು ಹಣ ಸಿಕ್ಕಿದ್ದು ಲೋಕಾಯುಕ್ತ ಸಿಬ್ಬಂದಿಯನ್ನು ದಂಗುಬಡಿಸಿದೆ. 

ಇಂದು ಲೋಕಾಯುಕ್ತ ನ್ಯಾಯಾಲಯ ಮುಂದೆ ಹಾಜರು: ಲಂಚ ಸ್ವೀಕರಿಸಿದ ಮತ್ತು ನೀಡಿದ ಆರೋಪದ ಮೇಲೆ ಪ್ರಶಾಂತ್ ಮಾಡಾಳ್​​​ ಸೇರಿ ಐವರನ್ನು ಬಂಧಿಸಲಾಗಿದೆ. ಪ್ರಶಾಂತ್ ಮಾಡಾಳ್ ಅವರ ಸಂಬಂಧಿ ಸಿದ್ದೇಶ್, ಬಿಡಬ್ಲ್ಯುಎಸ್ ಎಸ್ ಬಿಯ ಅಕೌಂಟೆಂಟ್ ಸುರೇಂದ್ರ, ಹಣ ನೀಡಲು ಬಂದಿದ್ದ ನಿಕೋಲಸ್, ಗಂಗಾಧರ್ ಎನ್ನುವವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ಇಂದು ಲೋಕಾಯುಕ್ತ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಿದ್ದಾರೆ. ಇನ್ನಷ್ಟು ವಿಚಾರಣೆಗಾಗಿ ಐವರನ್ನು ತಮ್ಮ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಕ್ಕೆ ಮನವಿ ಮಾಡುವ ಸಾಧ್ಯತೆಗಳಿವೆ.

ಬಿಜೆಪಿಗೆ ಇರಿಸುಮುರುಸು: ಹೇಳಿಕೇಳಿ ಇದು ವಿಧಾನಸಭೆ ಚುನಾವಣೆ ಸಮಯ. ಭ್ರಷ್ಟಾಚಾರ, 40% ಕಮಿಷನ್ ಆರೋಪಗಳು ಗುತ್ತಿಗೆದಾರರ ಸಂಘದಿಂದ, ವಿರೋಧ ಪಕ್ಷಗಳಿಂದ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಪದೇ ಪದೇ ಕೇಳಿಬರುತ್ತಿದೆ. ಇದೀಗ ಅದೇ ಪಕ್ಷದ ಶಾಸಕರ ಮನೆ ಮತ್ತು ಅವರ ಪುತ್ರನ ಕಚೇರಿ ಮೇಲೆ ಲೋಕಾಯುಕ್ತ ದಾಳಿಯಾಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು ಬಿಜೆಪಿ ಸರ್ಕಾರಕ್ಕೆ ಭಾರೀ ಇರಿಸುಮುರುಸಾಗಿದೆ. 

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮುಂದುವರೆದಿದೆ. ಬೆಂಗಳೂರಿನ ಸಂಜಯನಗರ ಬಳಿ ಇರುವ ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ ಒಡೆತನದ ಕೆ.ಎಂ.ವಿ ಮಾನ್ಷಿಯನ್ ನಿವಾಸದಲ್ಲಿ ಡಿವೈ ಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. 

ಏನಿದು ಆರೋಪ: ಟೆಂಡರ್ ಕೊಡಿಸುವ ವಿಚಾರದಲ್ಲಿ ಗುತ್ತಿಗೆದಾರನಿಂದ 80 ಲಕ್ಷಕ್ಕೂ ಹೆಚ್ಚು ಹಣಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 40 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಿನ್ನೆ ನಡೆದಿದೆ. 

ಶಾಸಕರ ಪುತ್ರ ಪ್ರಶಾಂತ್‌ ಮಾಡಾಳು BWSSBಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿದ್ದಾರೆ. KSDL ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದರು ಎನ್ನಲಾಗುತ್ತಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್​ಗಳಲ್ಲಿ 2 ಸಾವಿರ ರೂಪಾಯಿ ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿವೆ. ಕಚೇರಿಯಲ್ಲಿ ಈ ರೀತಿ ಕಂತೆಕಂತೆ ಹಣ ಸಿಕ್ಕಿದ್ದು ಇದೇ ಕಚೇರಿಯೋ ಇಲ್ಲ ಬ್ಯಾಂಕ್ ಕಚೇರಿಯೋ ಎಂದು ಜನಸಾಮಾನ್ಯರು ಹೌಹಾರುವಷ್ಟು ನಗದು ಸಿಕ್ಕಿದೆ. 

ಕಾಂಗ್ರೆಸ್ ಗೆ ಅಸ್ತ್ರ: ಇಷ್ಟು ದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ, ಎಲ್ಲಾ ಇಲಾಖೆಗಳಲ್ಲಿ, ಟೆಂಡರ್ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳುತ್ತಾ ಬರುತ್ತಿದ್ದ ಕಾಂಗ್ರೆಸ್ ಗೆ ಈಗ ಆಡಳಿತ ಪಕ್ಷದ ಮೇಲೆ ಹರಿಹಾಯಲು, ಚುನಾವಣಾ ಪ್ರಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೊಸ ಅಸ್ತ್ರ ಸಿಕ್ಕಂತಾಗಿದೆ. 

ಇಷ್ಟು ದಿನ ಭ್ರಷ್ಟಾಚಾರ ಆರೋಪ ಮಾಡಿದಾಗಲೆಲ್ಲ ದಾಖಲೆ ಕೊಡಿ ಎನ್ನುತ್ತಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರಿಗೆ ಲೋಕಾಯುಕ್ತ ದಾಳಿಯಿಂದ ಸರಿಯಾದ ದಾಖಲೆ ಸಿಕ್ಕಿತಲ್ಲವೇ, ಈಗ ಭ್ರಷ್ಟಾಚಾರದ ಹೊಣೆ ಹೊತ್ತು ರಾಜೀನಾಮೆ ನೀಡುವಿರಾ ಎಂದು ಕಾಂಗ್ರೆಸ್ ಅಣಕಿಸಿದೆ. ಕೂಡಲೇ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

ಬೆಂಬಲಿಗರ ವಿರೋಧ: ಮಾಡಾಳು ವಿರೂಪಾಕ್ಷ ಮನೆ ಮುಂದೆ ನಿನ್ನೆ ಲೋಕಾಯಕ್ತ ದಾಳಿ ನಡೆಯುತ್ತಿದ್ದಂತೆ ಅವರ ಬೆಂಬಲಿಗರು ಆಗಮಿಸಿ ಪ್ರತಿಭಟನೆ ಮಾಡಿ ಭಾರೀ ಹೈಡ್ರಾಮವೇ ನಡೆದಿದೆ. ಮಾಧ್ಯಮ ಪ್ರತಿನಿಧಿಗಳು ಮನೆ ಮುಂದೆ ಚಿತ್ರೀಕರಣ ಮಾಡುತ್ತಿದ್ದಾಗ ಬೆಂಬಲಿಗರು ಪ್ರತಿಭಟಿಸಿ ವಾಗ್ವಾದ ನಡೆಯಿತು.ಲೋಕಾಯುಕ್ತ ದಾಳಿ ನಡೆಯುತ್ತಿದ್ದಂತೆ ಶಾಸಕರು ತಮ್ಮ ಇನ್ನೊಬ್ಬ ಪುತ್ರ ಮಲ್ಲಿಕಾರ್ಜುನ ಜೊತೆ ಬೆಂಗಳೂರಿಗೆ ತೆರಳಿದ್ದಾರೆ. 

ಇಂದು ಭಾರೀ ಪ್ರತಿಭಟನೆ:ಇಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆ ತಾಲ್ಲೂಕು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ನಡೆಯಲಿದೆ. ಬಿಜೆಪಿ ಸರ್ಕಾರ ಮತ್ತು ವಿರೂಪಾಕ್ಷಪ್ಪ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ತಾಲ್ಲೂಕು ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಕೈ ನಾಯಕರು ಮನವಿ ಮಾಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT