ರಾಜ್ಯ

ಲೈಸೆನ್ಸ್ ನವೀಕರಣಕ್ಕೆ ಲಂಚ: ಬಿಬಿಎಂಪಿ ಹೆಲ್ತ್ ಇನ್ಸ್'ಪೆಕ್ಟರ್ ಲೋಕಾಯುಕ್ತ ಪೊಲೀಸರ ಬಲೆಗೆ

Manjula VN

ಬೆಂಗಳೂರು: ಲೈಸೆನ್ಸ್ ನವೀಕರಣಕ್ಕಾಗಿ ಲಂಚ ಸ್ವೀಕರಿಸುವ ವೇಳೆ ಬಿಬಿಎಂಪಿ ಹೆಲ್ತ್ ಇನ್ಸ್'ಪೆಕ್ಟರ್'ವೊಬ್ಬರು ಶನಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸಿ.ವಿ.ರಾಮನ್ ನಗರದ ಬಿಬಿಎಂಪಿ ವಿಭಾಗದಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ರಾಮಯ್ಯ ಬಂಧಿತ ಅಧಿಕಾರಿಯಾಗಿದ್ದಾರೆ. ನಗರದ ಇಂದಿರಾನಗರದಲ್ಲಿರುವ ವೆಲ್‌ನೆಸ್ ಸ್ಪಾ ಟ್ರೇಡ್ ಲೈಸೆನ್ಸ್ ನವೀಕರಣ ಮಾಡುವಂತೆ ಸುಬ್ರಹ್ಮಣ್ಯ ಎಂಬುವವರು ಅರ್ಜಿ ಸಲ್ಲಿಸಿದ್ದರು. ಪರವಾನಗಿ ನವೀಕರಣ ಮಾಡಲು ಬಂಧಿತ ಅಧಿಕಾರಿಯು ರೂ.18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಲಂಚ ನೀಡಲು ಇಷ್ಟವಿಲ್ಲದ ಕಾರಣ ಸುಬ್ರಹ್ಮಣ್ಯ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಕ್ರಮ ಕೈಗೊಂಡ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

SCROLL FOR NEXT