ರಾಜ್ಯ

ಕಾರವಾರ: ಬೃಹತ್ ಗಾತ್ರದ ಹಸಿರು ಆಮೆ ಶವ ಪತ್ತೆ

Manjula VN

ಕಾರವಾರ: ಕಾರವಾರದ ಕಾಳಿ ಅಳಿವೆ ದಂಡೆಯಲ್ಲಿ ಬೃಹತ್ ಗಾತ್ರದ ಹಸಿರು ಆಮೆಯ ಶವವೊಂದು ದಡದಲ್ಲಿ ಪತ್ತೆಯಾಗಿದೆ.

ಆಮೆಯ ಶವವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (ಕೆಯುಡಿ) ಸಾಗರ ಜೀವಶಾಸ್ತ್ರ ವಿಭಾಗದಲ್ಲಿ ಸಂರಕ್ಷಿಸಿಡಲು ನಿರ್ಧರಿಸಿದೆ.

ಕಾಳಿ ನದಿ ದಂಡೆಯ ಹೋಂಸ್ಟೇ ಬಳಿ ಮೃತ ಸ್ಥಿತಿಯಲ್ಲಿದ್ದ ಹಸಿರಾಮೆಯನ್ನು ಕಡಲಜೀವಶಾಸ್ತ್ರದ ಸಂಶೋಧಕ ವಿದ್ಯಾರ್ಥಿ ಸೂರಜ್ ಪೂಜಾರ್ ಪತ್ತೆ ಹಚ್ಚಿದ್ದಾರೆ‌.

ಕಾರವಾರ ಹಾಗೂ ಜಿಲ್ಲೆಯ ವಿವಿಧೆಡೆ ಹಸಿರು ಆಮೆಗಳು ದಡಕ್ಕೆ ಆಗಾಗ ಮೃತ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುತ್ತವೆ. ಸಾಕಷ್ಟು ಆಮೆಗಳ ಮೃತದೇಹ ಹದಗೆಟ್ಟ ಆಕಾರ, ಕೊಳೆತ ಸ್ಥಿತಿಯಲ್ಲಿ, ಗಾತ್ರದಲ್ಲಿ ಚಿಕ್ಕದಾಗಿ ಪತ್ತೆಯಾಗುತ್ತಿದ್ದವು. ಆದರೆ, ಈ ಆಮೆ ಅಸಾಧಾರಣ ಎಂಬಂತೆ ಗಾತ್ರದಲ್ಲಿ ದೊಡ್ಡದಾಗಿ ಹಾಗೂ ಉತ್ತಮ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವಿದ್ಯಾರ್ಥಿ ಸೂರಜ್ ಹೇಳಿದ್ದಾರೆ.

ಆಮೆಯು 3 .5 ಅಡಿ ಉದ್ದ ಮತ್ತು ಸುಮಾರು 2.5 ಅಡಿ ಅಗಲವಿದೆ. ಆಮೆಯ ಮೃತದೇಹ ಉತ್ತಮ ಸ್ಥಿತಿಯಲ್ಲಿದ್ದು, ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಸಂರಕ್ಷಿಸಿಡಲಾಗಿದೆ. ಸದ್ಯಕ್ಕೆ ಆಮೆಗೆ ಕೆಲವು ರಾಸಾಯನಿಕ ಚಿಕಿತ್ಸೆಗೆ ಒಳಪಡಿಸಲಾಗಿದೆ. ಸಂರಕ್ಷಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲು 10 ದಿನಗಳ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಆಮೆಗಳ ಮೃತದೇಹ ಪತ್ತೆಯಾಗುತ್ತಿದ್ದರೂ, ಇದೂವರೆಗೆ ಜೀವಂತ ಆಮೆಗಳು ಅಥವಾ ಅವುಗಳ ಗೂಡು ಪತ್ತೆಯಾಗಿಲ್ಲ. ಇದೇ ವರ್ಷ ಮಹಾರಾಷ್ಟ್ರದಿಂದ ಹಸಿರು ಆಮೆ ಕಡಲ ತೀರದಲ್ಲಿ ಗೂಡುಕಟ್ಟುವಿಕೆಯ ಮೊದಲ ಸುದ್ದಿ ವರದಿಯಾಗಿದೆ. ಅಂಡಮಾನ್ ದ್ವೀಪಗಳು ಹಸಿರಾಮೆಯ ಆಮೆಯ ಸಂತಾನೋತ್ಪತ್ತಿ ಕೇಂದ್ರವಾಗಿದೆ.

ಆಮೆಗಳಲ್ಲಿ ಹಸಿರು ಆಮೆಗಳು ದೊಡ್ಡ ಗಾತ್ರವುಳ್ಳವಾಗಿವೆ. ಅವರು ಕಡಲ ಹುಲ್ಲು ಮತ್ತು ಪಾಚಿಗಳನ್ನು ಆಹಾರವಾಗಿ ಬಳಸುತ್ತವೆ, ಹೀಗಾಗಿಯೇ ಕಡಲ ಹುಲ್ಲಿನ ಹಾಸಿಗೆಗಳಲ್ಲಿ ನೆಲೆಯೂರುತ್ತವೆ. ಅಲ್ಲಿಯೇ ಮೊಟ್ಟೆಗಳನ್ನೂ ಇಡುತ್ತವೆ. ಪ್ರೌಢ ಆಮೆಗಳು ಹೆಚ್ಚಾಗಿ ಆಳವಿಲ್ಲದ ನೀರಿನಲ್ಲಿ ಕಂಡುಬರುತ್ತವೆ.

SCROLL FOR NEXT