ರಾಜ್ಯ

ಶಿವಾಜಿ ಪ್ರತಿಮೆ ಕ್ರೆಡಿಟ್ ವಾರ್: ರಾಜ್‌ಹಂಸಗಡದಲ್ಲಿ ಬೃಹತ್ ಸಮಾವೇಶ ನಡೆಸುವಂತೆ ಸಿಎಂ ಬೊಮ್ಮಾಯಿಗೆ ಜಾರಕಿಹೊಳಿ ಒತ್ತಾಯ?

Manjula VN

ಬೆಂಗಳೂರು: ಬೆಳಗಾವಿ ಗ್ರಾಮಾಂತರದ ರಾಜಹಂಸಗಡದಲ್ಲಿ ಮರಾಠಾ ಚಕ್ರವರ್ತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕ್ರೆಡಿಟ್ ವಾರ್ ತಾರಕಕ್ಕೇರಿದ್ದು, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಮೆಯನ್ನು ಮರು ಉದ್ಘಾಟನೆಗೊಳಿಸಿದ ಹಿನ್ನೆಲೆಯಲ್ಲಿ ರಾಜ್‌ಹಂಸಗಡದಲ್ಲಿ ಬೃಹತ್ ಸಮಾವೇಶ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ಒತ್ತಾಯಿಸುತ್ತಿದ್ದಾರೆಂದು ತಿಳಿದುಬಂದಿದೆ.

ಮಾರ್ಚ್ 2 ರಂದು ಶಿವಾಜಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅನಾವರಣಗೊಳಿಸಿದ್ದರು. ನಂತರ ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಕೂಡ ಪ್ರತಿಮೆಯನ್ನು ಮರು ಅನಾವರಣಗೊಳಿಸಿದ್ದರು.

ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿಯವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಕ್ಷೇತ್ರದಲ್ಲಿರುವ ಅಪಾರ ಸಂಖ್ಯೆಯ ಮರಾಠಾ ಮತದಾರರನ್ನು ಸೇರಿಸಿ ದೊಡ್ಡ ಮಟ್ಟದ ಸಮಾವೇಶ ನಡೆಸುುವ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಮಾತುಕತೆ ವೇಳೆ ಬೊಮ್ಮಾಯಿಯವರು, ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು, ಇದಕ್ಕಾಗಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದರು, ಕಾಂಗ್ರೆಸ್ ನಾಯಕರು ಕೇವಲ ಹುಸಿ ಪ್ರತಿಷ್ಠೆಗಾಗಿ ಈ ನಾಟಕ (ಪುನರ್ ಉದ್ಘಾಟನೆ) ಮಾಡಿದ್ದಾರೆ, ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆಂದು ತಿಳಿದುಬಂದಿದೆ.

SCROLL FOR NEXT