ರಾಜ್ಯ

ವಿಧಾನಸಭೆ ಚುನಾವಣೆಗೆ ಸಿದ್ಧತೆ: ರಾಜ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತರ ತಂಡ ಮೂರು ದಿನಗಳ ಭೇಟಿ

Shilpa D

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ನೇತೃತ್ವದ ತಂಡ ವಿಧಾನಸಭಾ ಚುನಾವಣೆ ಪೂರ್ವಸಿದ್ಧತೆ ವೀಕ್ಷಣೆಗಾಗಿ ಇದೇ 9ರಂದು ಬೆಂಗಳೂರಿಗೆ ಭೇಟಿ ನೀಡಲಿದೆ.

ನಿಯೋಗದಲ್ಲಿ ಚುನಾವಣಾ ಆಯುಕ್ತರಾದ ಅನೂಪ್ ಚಂದ್ರ ಪಾಂಡೆ, ಅರುಣ್ ಗೋಯಲ್‌ ಸೇರಿದಂತೆ ಹಲವು ಅಧಿಕಾರಿಗಳು ಇರುತ್ತಾರೆ. ಅಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಜತೆ ಸಭೆ ನಡೆಸು ವರು. ನಂತರ ಪ್ರತ್ಯೇಕವಾಗಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತು ಕತೆ ನಡೆಸಿ, ಸಲಹೆ, ಅಭಿಪ್ರಾಯ ಪಡೆಯುವರು.

ಅಂದು ಸಂಜೆ ಹೋಟೆಲ್‌ ತಾಜ್‌ ವೆಸ್ಟೆಂಡ್‌ನಲ್ಲಿ ಹಮ್ಮಿಕೊಂಡಿರುವ ‘ಪ್ರಜಾಪ್ರಭುತ್ವದ ಒಳಗೊಳ್ಳುವಿಕೆ ಮತ್ತು ಸಮಗ್ರತೆ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸುವರು. ಹಲವು ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯುಕ್ತರು ನೇರವಾಗಿ ಹಾಗೂ ವಿಡಿಯೊ ಸಂವಾದದ ಮೂಲಕ ಭಾಗವಹಿಸುವರು.

ಮಾ. 10 ರಂದು ರಾಜ್ಯದ ಜಿಲ್ಲಾ ಚುನಾವಣಾಧಿಕಾರಿಗಳ ಜತೆ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಸುವರು. ಅಂದು ಸಂಜೆ ನಗರದ ಐಐಎಸ್‍ಸಿ ಆವರಣದಲ್ಲಿರುವ ಟಾಟಾ ಸಭಾಂಗಣದಲ್ಲಿ ನಡೆಯುವ ಮತದಾರರ ಜಾಗೃತಿ ಕಾರ್ಯಕ್ರಮ, ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಚುನಾವಣಾ ರಾಯಭಾರಿಗಳು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿರುವರು. ಮಾ. 11ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿರುವ ಎಲ್‌ಇಡಿ ವಾಹನವನ್ನು ಸಹ ಅವರು ಚಾಲನೆ ನೀಡಲಿದ್ದಾರೆ. ಮೂರನೇ ದಿನ, ಕುಮಾರ್ ಅವರು ಅನೇಕ ಸಭೆಗಳಲ್ಲಿ ಭಾಗವಹಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.

SCROLL FOR NEXT