ರಾಜ್ಯ

ರೈಸ್ ಪುಲ್ಲರ್ ಹಗರಣ: 35.30 ಲಕ್ಷ ರೂ. ಹಣ ವಶಕ್ಕೆ 8 ಮಂದಿ ಬಂಧನ

Srinivas Rao BV

ಬೆಂಗಳೂರು: ಸಾರ್ವಜನಿಕರಿಗೆ ರೈಸ್ ಪುಲ್ಲರ್ ಲೋಹದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಲೋಹದ ಪಾತ್ರೆಯಲ್ಲಿ ಏರೋಸ್ಪೇಸ್ ಸಂಸ್ಥೆಗಳು ಬಳಕೆ ಮಾಡುವ ತಾಮ್ರದ ಇರಿಡಿಯಮ್ ಲೋಹ ಇದೆ. ಇಂತಹ ಪಾತ್ರೆಗೆ ವಿಶೇಷವಾದ ಶಕ್ತಿ ಇದೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಕೋಟ್ಯಾಂತರ ರೂಪಾಯಿ ದುಡ್ಡು ಮಾಡಬಹುದು, ಕಡಿಮೆ ಬೆಲೆ ನಿಮಗೆ ಮಾರಾಟ ಮಾಡುತ್ತೇವೆ ಎಂದು ಒಂದಷ್ಟು ಖದೀಮರ ತಂಡ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುತ್ತಿತ್ತು. 

ವಂಚಕರು ಹೋಟೆಲ್ ಒಂದರಲ್ಲಿ ಸಂತ್ರಸ್ತರೊಂದಿಗೆ ಇಂಥಹದ್ದೇ ಮಾರಾಟದ ವ್ಯವಹಾರ ನಡೆಸಿ ಸಂತ್ರಸ್ತರ ಬಳಿ ದೋಚಿದ್ದ 35 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ವಂಚಕರನ್ನು ಬಂಧಿಸಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

ಆರೋಪಿಗಳಾದ ರಾಜೇಶ್ (36) ಮೊಹಮ್ಮದ್ ಘೌಸ್ ಪಾಶಾ (52) ಸ್ಟೀಫನ್ ಅಲಿಯಾಸ್ ನಯೀಮ್ (38) ಸಾಹಿಲ್ (37) ಶ್ರೀನಿವಾಸ್ (35), ವಿಕಾಸ್ (27) ಕುಮಾರ್ (29)  ಶ್ರೀ ವಸ್ಲನ್ (42)  ಬಂಧಿತ ಆರೋಪಿಗಳಾಗಿದ್ದಾರೆ. 

ವಿಶೇಷ ಶಕ್ತಿಯನ್ನು ಹೊಂದಿದ ಲೋಹದ ಪಾತ್ರೆ ಅಥವಾ ವಸ್ತು (ರೈಸ್ ಪುಲ್ಲರ್) ನ್ನು ಖರೀದಿಸಲು ಸಂತ್ರಸ್ತರು ರೈಸ್ ಪುಲ್ಲರ್ ಗ್ಯಾಂಗ್ ಸದಸ್ಯರಿಗೆ ಹಣ ನೀಡಿದ್ದರು.  

ಎಂಜಿ ರಸ್ತೆಯ ಹೋಟೆಲ್ ಒಂದರಲ್ಲಿ ಸಂತ್ರಸ್ತರಿಂದ ಹಣ ಪಡೆದು ಈ ವಂಚಕರು ನಾಪತ್ತೆಯಾಗಿದ್ದರು. ವಂಚಕರು ಯಾವುದೇ ರೈಸ್ ಪುಲ್ಲರ್ ನ್ನೂ ನೀಡಲಿಲ್ಲ ಅಥವಾ ಹಣವನ್ನೂ ವಾಪಸ್ ಕೊಡಲಿಲ್ಲ. ಆದ್ದರಿಂದ ಸಂತ್ರಸ್ತರು ಪೊಲೀಸರಿಗೆ ತಮಗಾದ ವಂಚನೆಯ ಬಗ್ಗೆ ದೂರು ನೀಡಿದ್ದರು. 

ತಮ್ಮ ಬಳಿ ಇದ್ದ ರೈಸ್ ಪುಲ್ಲರ್ ಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ. ನ್ಯೂಕ್ಲಿಯರ್ ಎನರ್ಜಿ ಚಾಲಿತ ಈ ರೀತಿಯ ರೈಸ್ ಪುಲ್ಲರ್ ಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಡಿಮಾಂಡ್ ಇದೆ. ಅದರಿಂದಾಗಿ ರಾತ್ರೋ ರಾತ್ರಿ ಶ್ರೀಮಂತರಾಗಬಹುದು, 5 ಕೋಟಿ ರೂಪಾಯಿ ಬೆಲೆ ಬಾಳುವ ಇಂತಹ ರೈಸ್ ಪುಲ್ಲರ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತಿರುವುದಾಗಿ ವಂಚಕರು ಸಂತ್ರಸ್ತರನ್ನು ನಂಬಿಸಿದ್ದರು. 

SCROLL FOR NEXT