ರಾಜ್ಯ

ಭ್ರಷ್ಟಾಚಾರ ಪ್ರಕರಣ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿಚಾರಣೆ; ಪುತ್ರನ ವಿರುದ್ಧ ಮತ್ತೆರಡು ಎಫ್ಐಆರ್ ದಾಖಲು

Manjula VN

ಬೆಂಗಳೂರು: ಲಂಚ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ  ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸುದೀರ್ಘ ವಿಚಾರಣೆಗೊಳಪಡಿಸಿದರು.

ಲಂಚ ಸ್ವೀಕರಿಸಿದ ಪ್ರಕರಣ ಸಂಬಂಧ ತಮ್ಮ ಪುತ್ರನನ್ನು ಬಂಧನಕ್ಕೊಳಪಡಾದ ಬಳಿಕ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಹೈಕೋರ್ಟ್ ಮಂಗಳವಾರ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, 48 ಗಂಟೆಗಳ ಒಳಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಿತ್ತು.

ನ್ಯಾಯಾಲಯದ ಆದೇಶದ ಎರಡು ದಿನಗಳ ನಂತರ ಗುರುವಾರ ಸಂಜೆ ವಿರೂಪಾಕ್ಷಪ್ಪ ತನಿಖಾಧಿಕಾರಿ ಎದುರು ಹಾಜರಾಗಿದ್ದರು. ಶೋಧ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ನಗದು ಹಾಗೂ ಹಲವು ವಿಚಾರಗಳ ಕುರಿತು ತನಿಖಾ ತಂಡ ಶಾಸಕರನ್ನು ವಿಚಾರಣೆಗೊಳಪಡಿಸಿತು.

ಏತನ್ಮಧ್ಯೆ, ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ (ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಣಕಾಸು ಸಲಹೆಗಾರ ಮತ್ತು ಮುಖ್ಯ ಖಾತೆ ಅಧಿಕಾರಿ), ಎರಡು ಖಾಸಗಿ ಕಂಪನಿಗಳ ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಮತ್ತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಮಾರ್ಚ್ 2 ರಂದು ದಾಖಲಾದ ಮೊದಲ ಎಫ್‌ಐಆರ್‌ನಲ್ಲಿ ವಿರೂಪಾಕ್ಷಪ್ಪ ಅವರನ್ನು ಆರೋಪಿ ನಂ 1 ಮತ್ತು ಅವರ ಪುತ್ರ ಪ್ರಶಾಂತ್ ಮಾಡಲ್ ಅವರನ್ನು ಆರೋಪಿ ನಂ,2 ಎಂದು ಹೆಸರಿಸಲಾಗಿದೆ.

SCROLL FOR NEXT