ರಾಜ್ಯ

ಬೆಳಗಾವಿ: ಬಿಜೆಪಿ-ಕಾಂಗ್ರೆಸ್'ನಿಂದ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ ಶುದ್ಧೀಕರಣಕ್ಕೆ ಎಂಇಎಸ್‌ ಮುಂದು

Manjula VN

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ ಈಚೆಗಷ್ಟೇ ಲೋಕಾರ್ಪಣೆಯಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಅಪಚಾರ ಮಾಡಿದ್ದು, ಮಾರ್ಚ್‌ 19ರಂದು ಇಡೀ ದಿನ ಪ್ರತಿಮೆ ಶುದ್ಧೀಕರಣ ನಡೆಸುವುದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ತಿಳಿಸಿದೆ.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಳಗಾವಿಯ ಮರಾಠಾ ಮಂದಿರ ಆವರಣದಲ್ಲಿ ಸಭೆ ನಡೆಸಿತು. ಸಭೆಯಲ್ಲಿ ಮಾರ್ಚ್ 19 ರಂದು ಪ್ರತಿಮೆ ಶುದ್ಧೀಕರಣ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಸಭೆಯಲ್ಲಿ ಮಾತನಾಡಿದ ಎಂಇಎಸ್‌ನ ಮಾಜಿ ಶಾಸಕ ಮನೋಹರ ಕಿಣೇಕರ್, ಮಹಾರಾಷ್ಟ್ರ ಪರ ಹಾಗೂ ಶಿವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಶುದ್ಧೀಕರಣ ಪೂಜೆಯಲ್ಲಿ ಕನಿಷ್ಠ 10,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಖ್ಯಾತ ಮರಾಠಿ ಲೇಖಕ ಗುಣವಂತ ಪಾಟೀಲ ಮಾತನಾಡಿ, ಕೇವಲ 15 ದಿನಗಳ ಕಾಲ ಶಿವಾಜಿ ಮಹಾರಾಜರನ್ನು ಸ್ಮರಿಸುವುದರಿಂದ ಮರಾಠಿ ಮತಗಳನ್ನು ಸೆಳೆಯಲು ಸಾಧ್ಯವಿಲ್ಲ. ತಮ್ಮ ಹೊಲಸು ರಾಜಕೀಯ ಆಟಗಳಲ್ಲಿ ಶಿವಾಜಿ ಮಹಾರಾಜರನ್ನು ಕರೆತಂದಿರುವುದು ದುರಾದೃಷ್ಟಕರಸ ಸಂಗತಿ. "ನಾವು ಪ್ರತಿ ಸೆಕೆಂಡ್ ಮತ್ತು ಪ್ರತಿ ನಿಮಿಷವೂ ಶಿವಾಜಿ ಮಹಾರಾಜರನ್ನು ಸ್ಮರಿಸುತ್ತೇವೆ, ಮರಾಠಿ ಜನರನ್ನು ಮೆಚ್ಚಿಸಲು ಶಿವಾಜಿ ಮಹಾರಾಜರ ಹೆಸರನ್ನು ಬಳಸುವ ತಂತ್ರಗಳು ರಾಜಕಾರಣಿಗಳಿಗೆ ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ ಎಂದು ತಿಳಿಸಿದರು.

ನೂರಕ್ಕೂ ಹೆಚ್ಚು ಗ್ರಾಮಗಳ ಜನರು ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಗ್ರಾಮವು ಎತ್ತಿನ ಬಂಡಿ ಮತ್ತು ಐದು ಲೀಟರ್ ಹಾಲಿನೊಂದಿಗೆ ಪೂಜೆಗೆ ಕೊಡುಗೆ ನೀಡಬೇಕು. ಹಾಲನ್ನು ಪೂಜೆಗೆ ಬಳಸಿಕೊಳ್ಳಲಾಗುವುದು, ಬೆಳಗಾವಿ ನಗರದ ಪ್ರತಿ ಬೀದಿಯಿಂದ ಕನಿಷ್ಠ 100 ಮರಾಠಿಗರು ಪೂಜೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿಮೆಗೆ ಅಭಿಷೇಕ, ಪೂಜೆ ನೆರವೇರಿಸಲು ಐದು ನದಿಗಳ ನೀರು ತರುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು

ಮಹಾರಾಷ್ಟ್ರದ ಪರ ಇರುವ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಂದೆಡೆ ಸೇರಿ ಪೂಜೆ ಸಲ್ಲಿಸಬೇಕು. ಹಾಗಾದಾಗ ಮಾತ್ರ ಪೂಜೆ ಸಫಲವಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಎಂಇಎಸ್‌ನ ಹಿರಿಯ ಮುಖಂಡ ದೀಪಕ ದಳವಿ, ಪ್ರಕಾಶ ಮರಗಲೆ, ವಿಕಾಸ ಕಲಘಟಗಿ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT