ರಾಜ್ಯ

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ  ಆರ್.ಧ್ರುವನಾರಾಯಣ ಹೃದಯಾಘಾತದಿಂದ ನಿಧನ

Shilpa D

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಂಸದ ಆರ್. ಧ್ರುವ ನಾರಾಯಣ ಅವರು ಶನಿವಾರ ಮೃತಪಟ್ಟಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಧ್ರುವ ನಾರಾಯಣ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್​ಎಂಎಸ್​​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಶನಿವಾರ ಬೆಳಗ್ಗೆ 6.30ರ ವೇಳೆಗೆ ಧ್ರುವನಾರಾಯಣ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ, ಕೂಡಲೇ ಅವರು ಡ್ರೈವರ್ ಗೆ ಕರೆ ಮಾಡಿದ್ದಾರೆ, ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ರಕ್ತ ವಾಂತಿ ಮಾಡಿಕೊಂಡ ಅವರಿಗೆ ಅಪಾರ ರಕ್ತ ಸ್ರಾವವಾಗಿತ್ತು. ಕುಟುಂಬಸ್ಥರು ಹೇಳುವ ಪ್ರಕಾರ ಧ್ರುವ ನಾರಾಯಣ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಮಂಜುನಾಥ್ ಹೇಳಿದ್ದಾರೆ.

1961 ಜುಲೈ 31ರಂದು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ಜನನಿಸಿದ್ದ ಧ್ರುವನಾರಾಯಣ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್​​ಸಿ ಕೃಷಿ ಪದವಿ ಪಡೆದುಕೊಂಡಿದ್ದರು. ನಂತರ ಸ್ನಾತಕೋತ್ತರ ಪದವಿ ಪಡೆದು, 1983ರಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್​ಗೆ ಸೇರ್ಪಡೆಗೊಂಡಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ 2008ರಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರಾಗಿ ಜಯ ಗಳಿಸಿದ್ದರು.

1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎ.ಆರ್. ಕೃಷ್ಣಮೂರ್ತಿ ಅವರ ಎದುರು ಪರಾಜಿತರಾದರು. ಆದರೆ ಇದೇ ಕೃಷ್ಣಮೂರ್ತಿ ಅವರನ್ನು 2004ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1 ಮತದಿಂದ ಧೃವನಾರಾಯಣ ಸೋಲಿಸಿದ್ದರು. ಹಾಗೆಯೇ 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಕೃಷ್ಣಮೂರ್ತಿ ಅವರನ್ನು ಸೋಲಿಸಿ ಸಂಸದರಾದರು

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕಾಂಗ್ರೆಸ್‌ ಅಭ್ಯಥಿಯಾಗಿ ಸ್ಪರ್ಧಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಮತದಾರರನ್ನು ಭೇಟಿ ಮಾಡುವ ಕಾರ್ಯದಲ್ಲಿ ತೊಡಗಿದ್ದರು.

SCROLL FOR NEXT