ರಾಜ್ಯ

ಬೆಂಗಳೂರು: ಪೊಲೀಸರ ಸೋಗಿನಲ್ಲಿ 1.2 ಕೋಟಿ ರೂ. ಮೌಲ್ಯದ ಚಿನ್ನ ಕದ್ದ ಖದೀಮರು

Manjula VN

ಬೆಂಗಳೂರು: ಚಿನ್ನಾಭರಣ ಖರೀದಿಗಾಗಿ ರಾಯಚೂರಿನಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರನ್ನು ಅಡ್ಡಗಟ್ಟಿದ ಖದೀಮರು ತಾವು ಪೊಲೀಸರೆಂದು ಹೇಳಿ ತಪಾಸಣೆ ನೆಪದಲ್ಲಿ ಅವರ ಬಳಿ ಇದ್ದ 1.12 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಚೂರಿನ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಎಂಬುವವರು ಚಿನ್ನಾಭರಣ ಖರೀದಿ ಮಾಡಲು ನಗರಕ್ಕೆ ಬಂದಿದ್ದರು. ಚಿನ್ನ ಖರೀದಿಸಿದ ಬಳಿಕ ಬಸ್ ನಲ್ಲಿ ರಾಯಚೂರಿಗೆ ತೆರಳಲು ಆನಂದ್ ರಾವ್ ಸರ್ಕಲ್ ಗೆ ನಿಂತಿದ್ದರು. ಈ ವೇಳೆ ಪೊಲೀಸರ ಸೋಗಿನಲ್ಲಿ ಸ್ಥಳಕ್ಕೆ ಬಂದಿರುವ ಇಬ್ಬರು ಖದೀಮರು ತಪಾಸಣೆ ನಡೆಸುವ ನೆಪದಲ್ಲಿ ಬ್ಯಾಗ್'ನ್ನು ಕಸಿದುಕೊಂಡು ಆಟೋದಲ್ಲಿ ಪರಾರಿಯಾಗಿದ್ದಾರೆ.

ರಾಯಚೂರಿನಲ್ಲಿರುವ ಮಾಲೀಕರು ಬೆಂಗಳೂರಿನ ರಾಜಮಾರುಕಟ್ಟೆಯ ಡೀಲರ್‌ಗಳಿಂದ ಚಿನ್ನಾಭರಣ ಖರೀದಿ ಮಾಡುವಂತೆ ರಜಾಕ್ ಮತ್ತು ಮಲ್ಲಯ್ಯ ಅವರನ್ನು ನಗರಕ್ಕೆ ಕಳುಹಿಸಿದ್ದರು ಎಂದು ಸಂತ್ರಸ್ತರು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಂಚಕರು ಹಾಗೂ ಮಾಲುಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

SCROLL FOR NEXT