ರಾಜ್ಯ

ಹಂಪಿಯಲ್ಲಿ ಮಾರ್ಗಸೂಚಿಗಳ ಉಲ್ಲಂಘನೆ: ವರದಿ ಸಲ್ಲಿಸುವಂತೆ ಪುರಾತತ್ವ ಇಲಾಖೆಗೆ ಯುನೆಸ್ಕೋ ಸೂಚನೆ

Manjula VN

ಹೊಸಪೇಟೆ: ಹಂಪಿಯಲ್ಲಿ ಮಾರ್ಗಸೂಚಿಗಳು ಉಲ್ಲಂಘನೆಯಾಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿರುವ ಯುನೆಸ್ಕೋ, ಈ ಕುರಿತು ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಹಂಪಿಯಲ್ಲಿ ಕೆಲವು ತಿಂಗಳ ಹಿಂದೆ ವಿರೂಪಾಕ್ಷ ದೇವಸ್ಥಾನದ ಸಮೀಪ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿತ್ತು. ಇದರಲ್ಲದೆ, ಬುಕ್ಕಸಾಗರದಲ್ಲಿ ಕಲ್ಲು ಕ್ವಾರಿ ಘಟಕ ಮತ್ತು ನಿಷೇಧಿತ ವಲಯದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಗಳು ಕಂಡು ಬಂದಿತ್ತು. ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಯುನೆಸ್ಕೋ ವರದಿ ಸಲ್ಲಿಸುವಂತೆ ಪುರಾತತ್ವ ಇಲಾಖೆಗೆ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ.

ಹಂಪಿ ಸಂರಕ್ಷಿತ ಪ್ರದೇಶದಲ್ಲಿ ಯೋಜನೆಗಳ ಅನುಷ್ಠಾನ ಸೇರಿದಂತೆ ಅಭಿವೃದ್ಧಿ ಚಟುವಟಿಕೆಗಳ ಕುರಿತು ಯುನೆಸ್ಕೋ ಅಧಿಕಾರಿಗಳು ವರದಿ ಕೇಳಿದ್ದಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಎಎಸ್ಐ ಮತ್ತು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ವರದಿಯನ್ನು ದೆಹಲಿಯ ಎಎಸ್ಐ ಕಚೇರಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಹಂಪಿಯಲ್ಲಿ ಭದ್ರತೆ ಇಲ್ಲದಿರುವುದೇ ಯುನೆಸ್ಕೋ ಮಾರ್ಗಸೂಚಿ ಉಲ್ಲಂಘನೆಗೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ್ ಎಚ್ ಅವರು ಹೇಳಿದ್ದಾರೆ.

“ಸಂರಕ್ಷಿತ ಪ್ರದೇಶದಲ್ಲಿ ಅನೇಕ ಅಮೂಲ್ಯ ಸ್ಮಾರಕಗಳು ಮತ್ತು ಶಾಸನಗಳಿವೆ. ಆದರೆ, ಅವುಗಳ ರಕ್ಷಣೆಗೆ ಕೇವಲ 100 ಸಿಬ್ಬಂದಿಗಳಿದ್ದಾರೆ. ಸ್ಮಾರಕಗಳ ರಕ್ಷಣೆಗೆ ಅಧಿಕಾರಿಗಳು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ತಿಳಿಸಿದ್ದಾರೆ.

ಈ ನಡುವೆ ದೆಹಲಿಯಲ್ಲಿರುವ ಯುನೆಸ್ಕೋ ಅಧಿಕಾರಿಗಳ ತಂಡ ಶೀಘ್ರದಲ್ಲೇ ಹಂಪಿಗೆ ಭೇಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.

ತಂಡವು ಹಂಪಿಗೆ ಸಂಬಂಧಿಸಿದ ವಿವಿಧ ವಿಷಯಗಳು ಮತ್ತು ಯುನೆಸ್ಕೋ ಮಾರ್ಗಸೂಚಿಗಳ ಉಲ್ಲಂಘನೆ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ ಎಂದು ಹಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT