ರಾಜ್ಯ

ಬೆಂಗಳೂರು: ಆಟೋ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

Manjula VN

ಬೆಂಗಳೂರು: ರ್ಯಾಪಿಡೋ, ಓಲಾ, ಉಬರ್ ಕಂಪನಿಗಳ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ವಿರೋಧಿಸಿ ಆಟೋ ಒಕ್ಕೂಟಗಳು ಸೋಮವಾರ ಕರೆ ನೀಡಿದ್ದ 24 ಗಂಟೆಗಳ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆಟೋ ಚಾಲಕರು ಜಾಥಾದ ಮೂಲಕ ರೇಸ್ ಕೋರ್ಟ್ ಸಮೀಪದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯೇ ಚಾಲಕರನ್ನು ಪೊಲೀಸರು ತಡೆದರು, ಈ ಸಂದರ್ಭದಲ್ಲಿ ಆಟೋ ಚಾಲಕರ ಮೇಲೆ ಲಘು ಪ್ರಹಾರ ನಡೆಸಿದರು. ಬಳಿಕ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆದುಕೊಂಡರು.

ಘಟನೆ ವೇಳೆ ಬೆಂಗಳೂರು ಆಟೋ ಚಾಲಕರ ಒಕ್ಕೂಟದ ಫೆಡರೇಶನ್ ಸಂಚಾಲಕ ಮಂಜುನಾಥ್ ಅವರ ಕಣ್ಣಿಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಂಜುನಾಥ್ ಅವರು, ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಕಡೆಗೆ ಹೋಗುತ್ತಿದ್ದ ಆಟೋ ಚಾಲಕರನ್ನು ತಡೆ ಹಿಡಿಯಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ವೇಳೆ ನನ್ನ ಕಣ್ಣುಗಳಿಗೆ ಗಾಯಗಳಾಯಿತು. ಬಳಿಕ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲಾಯಿತು. ವೈದ್ಯರು 4 ದಿನಗಳ ಕಾಲ ವಿಶ್ರಾಂತಿಗೆ ಸಲಹೆ ನೀಡದ್ದಾರೆಂದು ಹೇಳಿದ್ದಾರೆ.

ಮುಷ್ಕರ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಸುಮಾರು ಎರಡು ಲಕ್ಷ ಆಟೋಗಳಿವೆ. ಆದರೆ, ಮುಷ್ಕರಕ್ಕೆ ಕೆಲವರಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಮುಷ್ಕರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿಯೂ ಮಾಹಿತಿ ಹಂಚಿಕೊಳ್ಳಲಾಗಿತ್ತು. ಪ್ರತಿಯೊಂದು ಆಟೋ ಸ್ಟ್ಯಾಂಡ್ ಗಳಿಗೂ ಪ್ರಮುಖವಾಗಿ ಹೊರವಲಯದ ಆಟೋ ಸ್ಟ್ಯಾಂಡ್ ಗಳಿಗೆ ಭೇಟಿ ನೀಡಿದಿದ್ದರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಆದರೆ, ನಮ್ಮ ಬಳಿಕ ಅತ್ಯಂತ ಕಡಿಮೆ ಸಮಯವಿದ್ದ ಕಾರಣ ಉತ್ತಮ ಪ್ರತಿಕ್ರಿಯೆ ಬರಲಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಆಟೋ ಮುಷ್ಕರದಿಂದಾದಿ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಮುಷ್ಕರವನ್ನು ಕೆಲವರು ದುರ್ಬಳಕೆ ಮಾಡಿಕೊಡಿದ್ದು, ಬೇಕಾಬಿಟ್ಟಿ ಬಾಡಿಗೆ ಹಣವನ್ನು ಪಡೆದುಕೊಂಡರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೆಸಿ ರಸ್ತೆಯಿಂದ ಬನಶಂಕರಿಗೆ ಹೋಗಬೇಕಿತ್ತು. ಇದಕ್ಕಾಗಿ  ನಾನು ರೂ 400 ಪಾವತಿಸಿದೆ, ಸಾಮಾನ್ಯ ದಿನಗಳಲ್ಲಿ ರೂ.100 ಕೂಡ ಆಗುತ್ತಿರಲಿಲ್ಲ ಎಂದು ಎಂಎನ್‌ಸಿ ಉದ್ಯೋಗಿ ಪ್ರಭಾ ಅವರು ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆ ನಡುವೆ ಆಟೊ ಚಾಲಕರ ಒಕ್ಕೂಟದ ಸಂಘವು ತಮ್ಮ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದರು.

SCROLL FOR NEXT