ರಾಜ್ಯ

ಬೆಂಗಳೂರು ಟೆಕಿ ಅತ್ಯಾಚಾರ-ಕೊಲೆ ಪ್ರಕರಣ: ಅಪರಾಧಿ ಶಿವಕುಮಾರ್ ಗೆ ಜೀವಾವಧಿ ಶಿಕ್ಷೆ

Srinivasamurthy VN

ನವದೆಹಲಿ: ಬೆಂಗಳೂರಿನ ಐಟಿ ಕಂಪನಿಯೊಂದರ ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದ ಅಪರಾಧಿ ಶಿವ ಕುಮಾರ್ ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಡಿಸೆಂಬರ್ 13, 2005 ರಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯನ್ನು ರಾತ್ರಿ ಪಾಳಿ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆಕೆಯನ್ನು ಮನೆಗೆ ಡ್ರಾಪ್ ಮಾಡಬೇಕಿದ್ದ ಕ್ಯಾಬ್ ಚಾಲಕ ಶಿವಕುಮಾರ್, ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ವ್ಯಕ್ತಿಯೊಬ್ಬನಿಗೆ 30 ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ. 

28ರ ಹರೆಯದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಕೊಂದಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 366 (ಅಪಹರಣ), 376 (ಅತ್ಯಾಚಾರ) ಮತ್ತು 302 (ಕೊಲೆ) ಅಡಿಯಲ್ಲಿ ಕರ್ನಾಟಕ ಹೈಕೋರ್ಟ್ ಅಪರಾಧಿ ಎಂದು ಘೋಷಿಸಿದ ನಂತರ ಶಿವಕುಮಾರ್ ನನ್ನು ಜೈಲಿನಲ್ಲಿ ಇರಿಸಲಾಗಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಹಾಗೂ ರಾಜೇಶ್‌ ಬಿಂದಲ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, ‘ಆರೋಪಿಯು 30 ವರ್ಷಗಳ ಸೆರೆವಾಸ ಪೂರ್ಣಗೊಳಿಸುವವರೆಗೂ ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತಿಲ್ಲ’ ಎಂದು ಆದೇಶಿಸಿದೆ.

ಈ ಹಿಂದೆ ಅಪರಾಧಿ ವ್ಯಕ್ತಿ ಬದುಕಿರುವವರೆಗೂ ಆರೋಪಿಯು ಜೈಲಿನಲ್ಲೇ ಕಳೆಯಬೇಕು ಎಂದು ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡಿತ್ತು. ಈ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು. ಇದರ ವಿರುದ್ಧ ಆರೋಪಿ ಶಿವಕುಮಾರ ಅಲಿಯಾಸ್‌ ಶಿವ ಅಲಿಯಾಸ್‌ ಶಿವಮೂರ್ತಿ ಎಂಬಾತ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಇದೀಗ ಈ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

‘ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿ ಕೈತುಂಬಾ ಸಂಬಳ ಪಡೆಯುತ್ತಿದ್ದ ವಿವಾಹಿತ ಮಹಿಳೆಯು ಸುಂದರ ಬದುಕು ಕಟ್ಟಿಕೊಂಡಿದ್ದರು. ಆರೋಪಿಯ ದುಷ್ಕೃತ್ಯದಿಂದಾಗಿ 28ನೇ ವಯಸ್ಸಿನಲ್ಲೇ ಆಕೆಯ ಜೀವನ ಅಂತ್ಯಗೊಂಡಿದೆ’ ಎಂದು ಹೇಳಿದ ನ್ಯಾಯಪೀಠವು ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಪರಿಷ್ಕರಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. 

‘ಬೆಂಗಳೂರು ನಗರವು ದೇಶದ ‘ಸಿಲಿಕಾನ್ ವ್ಯಾಲಿ’ ಎಂದೇ ಗುರುತಿಸಿಕೊಂಡಿದೆ. ಇಂತಹ ಮಹಾನಗರಗಳಲ್ಲಿ ಪ್ರತಿಷ್ಠಿತ ಐಟಿ ಕಂಪನಿಗಳು ತಲೆ ಎತ್ತಿದ್ದು, ಅವುಗಳಲ್ಲಿ ಮಹಿಳಾ ಸಿಬ್ಬಂದಿಯೇ ಅಧಿಕ ಸಂಖ್ಯೆಯಲ್ಲಿ ಕೆಲಸಕ್ಕಿದ್ದಾರೆ. ಈ ಕಂಪನಿಗಳು ವಿದೇಶಗಳಲ್ಲೂ ಗ್ರಾಹಕರನ್ನು ಹೊಂದಿರುವುದರಿಂದಾಗಿ ಸಿಬ್ಬಂದಿಯು ರಾತ್ರಿ ಪಾಳಿಯಲ್ಲೂ ಕೆಲಸ ಮಾಡಬೇಕಿದೆ. ಇಂತಹ ಕಂಪನಿಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆ ಮುಖ್ಯವಾಗುತ್ತದೆ’ ಎಂದು ನ್ಯಾಯಮೂರ್ತಿ ಓಕಾ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಕ್ಯಾಬ್ ಚಾಲಕನಾಗಿದ್ದ ಆರೋಪಿಯು ಸಂತ್ರಸ್ತೆಯನ್ನು ಮನೆಗೆ ಬಿಡಲು ಹೋಗಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಈ ಘಟನೆಯು ದೇಶಾದ್ಯಂತ ವ್ಯಾಪಕ ಆಕ್ರೋಶ ಪ್ರತಿಭಟನೆಗೆ ಕಾರಣವಾಗಿತ್ತು. ಅಲ್ಲದೆ ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಸರ್ಕಾರವು ನೀತಿಗಳನ್ನು ರೂಪಿಸುವಂತೆ ಮಾಡಿತು. 2010ರಲ್ಲಿ ಬೆಂಗಳೂರಿನ ತ್ವರಿತ ನ್ಯಾಯಾಲಯ ಶಿವಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2016 ರಲ್ಲಿ, ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ, ಮರಣದಂಡನೆ ವಿಧಿಸಲು ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿತ್ತು.

SCROLL FOR NEXT