ರಾಜ್ಯ

ಹಿಂಡಲಗಾ ಜೈಲಿನಿಂದ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ಕೈದಿಯನ್ನು ಮಹಾರಾಷ್ಟ್ರಕ್ಕೆ ಕರೆದೊಯ್ದ ನಾಗ್ಪುರ ಪೊಲೀಸರು

Ramyashree GN

ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದ ಜಯೇಶ್ ಕಾಂತ ಅಲಿಯಾಸ್ ಜಯೇಶ್ ಪೂಜಾರಿ ಎಂಬಾತನನ್ನು ಹೆಚ್ಚಿನ ವಿಚಾರಣೆಗಾಗಿ ನಾಗ್ಪುರ ಪೊಲೀಸರು ಮಂಗಳವಾರ ಹಿಂಡಲಗಾ ಜೈಲಿನಿಂದ ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದಾರೆ.

ಮಂಗಳೂರಿನ ಜೋಡಿ ಕೊಲೆ ಪ್ರಕರಣದ ಆರೋಪಿ ಪೂಜಾರಿ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿದ್ದು, ಜನವರಿ 14 ಮತ್ತು ಮಾರ್ಚ್ 21 ರಂದು ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಸೆಲ್ ಫೋನ್ ಬಳಸಿ ನಾಗ್ಪುರದಲ್ಲಿರುವ ಕೇಂದ್ರ ಸಚಿವ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದರು. ಕೇಂದ್ರ ಸಚಿವ ಗಡ್ಕರಿ 100 ಕೋಟಿ ರೂ. ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಮಹಾರಾಷ್ಟ್ರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತನಿಖೆ ಪೂರ್ಣಗೊಳ್ಳುವ ಮುನ್ನ ಮಾರ್ಚ್ 21 ರಂದು ನಾಗ್ಪುರದಲ್ಲಿರುವ ಸಚಿವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಖೈದಿ ಫೋನ್ ಕರೆಗಳನ್ನು ಮಾಡಿದ್ದಾನೆ. ಅಂದು ಮೂರು ಬಾರಿ ಕರೆ ಮಾಡಿ 10 ಕೋಟಿ ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ್ದನು. ಈ ಕರೆಗಳಿಂದ ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬೆಚ್ಚಿಬಿದ್ದಿದ್ದು, ನಾಗ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಾಗ್ಪುರ ಪೊಲೀಸರು ಬೆಳಗಾವಿಗೆ ಆಗಮಿಸಿದ್ದರು. ವಿಚಾರಣೆ ಬಳಿಕ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಜಯೇಶ್ ಪೂಜಾರಿಯನ್ನು ಕಸ್ಟಡಿಗೆ ತೆಗೆದುಕೊಂಡರು. ಕೈದಿಯಿಂದ ಒಂದು ಮೊಬೈಲ್ ಫೋನ್ ಮತ್ತು ಎರಡು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಚಿವ ಗಡ್ಕರಿ ಅವರಿಗೆ ಬೆದರಿಕೆ ಹಾಕಲು ಈ ಸಿಮ್ ಕಾರ್ಡ್ ಹಾಗೂ ಫೋನ್ ಬಳಸಲಾಗಿತ್ತು ಎನ್ನಲಾಗಿದೆ.

SCROLL FOR NEXT