ರಾಜ್ಯ

ನಿಷೇಧದ ಹೊರತಾಗಿಯೂ ಮಾರುಕಟ್ಟೆಯಲ್ಲಿ ಇ-ಸಿಗರೇಟ್'ಗಳ ಬಹಿರಂಗ ಮಾರಾಟ: ಸಮೀಕ್ಷೆಯಲ್ಲಿ ಬಹಿರಂಗ

Manjula VN

ಬೆಂಗಳೂರು: ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಸಿಗರೆಟ್‌ಗಳ ಮೇಲೆ ನಿಷೇಧ ಹೇರಿದ್ದರೂ, ಎಲೆಕ್ಟ್ರಾನಿಕ್ ಸಿಗರೇಟ್‌ಗಳು ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಮಾರಾಟವಾಗುತ್ತಿವೆ ಎಂಬ ಆಘಾತಕಾರಿ ಅಂಶವೊಂದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ನಿಷೇಧಿತ ಎಲೆಕ್ಟ್ರಾನಿಕ್ ಸಿಗರೆಟ್‌ಗಳು ತಂಬಾಕು ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿವೆ. ಇವುಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ ನೇತೃತ್ವದ 5 ಸಂಸ್ಥೆಗಳು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಬಹಿರಂಗಪಡಿಸಿವೆ.

ಈ ಸಮೀಕ್ಷೆಯು ಕರ್ನಾಟಕ, ತೆಲಂಗಾಣ, ದೆಹಲಿ, ಅಸ್ಸಾಂ, ಗೋವಾ, ಹರಿಯಾಣ ಮತ್ತು ಉತ್ತರ ಪ್ರದೇಶ ಎಂಬ ಏಳು ರಾಜ್ಯಗಳಲ್ಲಿ ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ ನೇತೃತ್ವದ ಐದು ಸಂಸ್ಥೆಗಳು ಸಮೀಕ್ಷೆ ನಡೆಸಿವೆ.

ಇ-ಸಿಗರೇಟ್‌ಗಳನ್ನು ನಿಷೇಧಿಸಿರುವ ಕುರಿತು ಬಹುತೇಕ ಮಾರಾಟಗಾರರಿಗೆ ಮಾಹಿತಿಯೇ ತಿಳಿದಿಲ್ಲ. ಈ ಉತ್ಪನ್ನಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಆರ್ಡರ್ ಮಾಡಿದ 2 ದಿನಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಆರ್ಡರ್ ಡೆಲಿವರಿ ಸಂದರ್ಭದಲ್ಲಿ ವಯಸ್ಸಿನ ಪರಿಶೀಲನೆಗಳೂ ನಡೆಯುತ್ತಿಲ್ಲ ಎಂದು ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.

ಇ-ಸಿಗರೇಟ್ ನಿಷೇಧದ ಉಲ್ಲಂಘನೆಯ ಪುರಾವೆಗಳನ್ನು ಖಚಿತಪಡಿಸಿಕೊಳ್ಳಲು ಕ್ಷಿಪ್ರ ಸಮೀಕ್ಷೆ ಮತ್ತು ಮಾದರಿ ಸಂಗ್ರಹಣೆಯನ್ನು ಮಾಡಲಾಗಿದೆ. ಇದರಲ್ಲಿ ಅಂಗಡಿಗಳು ಮತ್ತು ಮಾರಾಟಗಾರರನ್ನು ತನಿಖೆಗಾಗಿ ಆಯ್ಕೆ ಮಾಡಲಾಗಿದೆ. ಸಮೀಕ್ಷೆಯನ್ನು ನಡೆಸಿ, ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳಲ್ಲಿ ಪುರಾವೆಗಳನ್ನು ಸಂಗ್ರಹಿಸಲಾಗಿದೆ.

ಇ-ಸಿಗರೇಟ್ ನಿಷೇಧವು ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಂಘಟಿತ ಪ್ರಯತ್ನವು ತುರ್ತಾಗಿ ಅಗತ್ಯವಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಡಾ. ಅಶೋಕ್ ಪಾಟೀಲ್ ಅವರು ಹೇಳಿದ್ದಾರೆ.

ಮಾರ್ಚ್ 21 ರವರೆಗೆ ಬೆಂಗಳೂರಿನಲ್ಲಿ ನಡೆಸಿದ ಜಾರಿ ಕಾರ್ಯಾಚರಣೆಗಳಲ್ಲಿ, ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ - 2019 ಮತ್ತು ಸಿಗರೇಟ್‌ಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ 2013 ಅಡಿಯಲ್ಲಿ 8.9 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಇ-ಸಿಗರೇಟ್‌ಗಳು (681 ಸಂಖ್ಯೆಗಳು) ಮತ್ತು ಅಕ್ರಮ ವಿದೇಶಿ ಸಿಗರೇಟ್‌ಗಳನ್ನು (805 ಪ್ಯಾಕ್‌ಗಳು) ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

"ಇ-ಸಿಗರೆಟ್‌ಗಳು ಉಸಿರಾಟ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುವ ವ್ಯಸನವನ್ನುಂಟು ಮಾಡುವ ನಿಕೋಟಿನ್ ಅನ್ನು ಹೊಂದಿರುತ್ತವೆ. ಇದರ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಮತ್ತು ಇ-ಸಿಗರೇಟ್ ಮಾರಾಟ ಮಾಡುವ ಸ್ಥಳಗಳ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮಾಹಿತಿ ನೀಡಬೇಕು” ಎಂದು ಖ್ಯಾತ ಕ್ಯಾನ್ಸರ್ ತಜ್ಞ ಡಾ.ರಮೇಶ ಬಿಳಿಮಗ್ಗ ಹೇಳಿದರು.

SCROLL FOR NEXT