ರಾಜ್ಯ

ಪಂಚವಾರ್ಷಿಕ ಯೋಜನೆಗಳು ಕಾಂಗ್ರೆಸ್ ನಾಯಕರನ್ನು ಶ್ರೀಮಂತರನ್ನಾಗಿಸಿದೆ: ಯೋಗಿ ಆದಿತ್ಯನಾಥ್

Manjula VN

ರಾಯಚೂರು/ಕಲಬುರಗಿ: ಕಾಂಗ್ರೆಸ್‌ ಪರಿಚಯಿಸಿದ ಪಂಚವಾರ್ಷಿಕ ಯೋಜನೆಗಳು ಕಾಂಗ್ರೆಸ್‌ ನಾಯಕರು ಶ್ರೀಮಂತರಾಗಲು ನೆರವಾದವು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭಾನುವಾರ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ರಾಯಚೂರು ಬಿಜೆಪಿ ಅಭ್ಯರ್ಥಿ ಶಿವರಾಜ್ ಪಾಟೀಲ್ ಪರ ಆದಿತ್ಯನಾಥ್ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಲವು ಸಮುದಾಯಗಳನ್ನು ಮೆಚ್ಚಿಸಲು ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

 ಬಿಜೆಪಿ ಸರ್ಕಾರವು ಎಲ್ಲಾ ಸಮುದಾಯಗಳ ಪರವಾಗಿ ಮಾಡುತ್ತಿದೆ. ಪಕ್ಷದ ಮುಖ್ಯ ಗುರಿ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಆಗಿದೆ ಎಂದು ತಿಳಿಸಿದರು.

ರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದರಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿ ಸರ್ಕಾರ ಅಯೋಧ್ಯೆಯಲ್ಲಿ ಮಂದಿರವನ್ನು ನಿರ್ಮಿಸುತ್ತಿದೆ ಎಂದರು.

ಏತನ್ಮಧ್ಯೆ, ಚಿತ್ತಾಪುರ ಕ್ಷೇತ್ರದ ವಾಡಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ವಿಷಪೂರಿತ ಹಾವು’ ಹೇಳಿಕೆಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಿ ತಕ್ಕ ಪಾಠ ಕಲಿಸುವಂತೆ ಚಿತ್ತಾಪುರದ ಮತದಾರರಿಗೆ ನೀಡಿದರು.

ಬಡವರು ಮತ್ತು ದೀನದಲಿತರಿಗಾಗಿ ದುಡಿಯುವ ನಾಯಕರನ್ನು ನಿಂದಿಸುವ ಕಾಂಗ್ರೆಸ್ ಪರಂಪರೆಯನ್ನು ಮಲ್ಲಿಕಾರ್ಜುನ ಖರ್ಗೆ ಮುಂದುವರಿಸಿದ್ದಾರೆ. “ಇಡೀ ವಿಶ್ವವೇ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚುತ್ತದೆ. ಆದರೆ ಕಾಂಗ್ರೆಸ್ ನಾಯಕರು ಅಧಿಕಾರದ ಹಸಿವಿನಿಂದಾಗಿ ಬಿಜೆಪಿ ಮತ್ತು ಮೋದಿಯ ಮೇಲೆ ವಾಗ್ದಾಳಿ ನಡೆಸುತ್ತಾರೆಂದು ಕಿಡಿಕಾರಿದರು.

ಕರ್ನಾಟಕ ಮತ್ತು ಉತ್ತರ ಪ್ರದೇಶ ಐತಿಹಾಸಿಕ ಸಂಬಂಧಗಳನ್ನು ಹೊಂದಿದೆ. “ರಾಮನು ಉತ್ತರ ಪ್ರದೇಶದ ಅಯೋಧ್ಯೆಗೆ ಸೇರಿದವನಾಗಿದ್ದರೆ, ಅವನ ಶಿಷ್ಯ ಹನುಮಂತನು ಕರ್ನಾಟಕದ ಕಿಷ್ಕಿಂದೆಯಲ್ಲಿ ಜನಿಸಿದವನಾಗಿದ್ದಾನೆಂದು ಹೇಳಿದರು.

ಇದೇ ವೇಳೆ 2024 ರ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಕರ್ನಾಟಕದ ಜನತೆಗೆ ಆದಿತ್ಯನಾಥ್ ಅವರು ಆಹ್ವಾನ ನೀಡಿದರು.

ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರ ದ್ವೇಷದ ಭಾಷಣದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಮತದಾರರನ್ನು ಕೇಳುತ್ತಿಲ್ಲ, ಆದರೆ, ಮೋದಿ ಅವರು ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳ ಮೇಲೆ ಮತ ನೀಡುವಂತೆ ಮನವಿ ಮಾಡಿಕೊಂಡರು.

SCROLL FOR NEXT