ರಾಜ್ಯ

ರಾಜ್ಯದ ಜಲಾಶಯಗಳಲ್ಲಿ ಅತ್ಯಂತ ವೇಗವಾಗಿ ಕುಸಿಯುತ್ತಿದೆ ನೀರಿನ ಮಟ್ಟ

Lingaraj Badiger

ಬೆಂಗಳೂರು: ಮುಂಗಾರು ಪೂರ್ವ ಮಳೆ ಕೊರತೆ ಹಾಗೂ ಸುಡುವ ಬೇಸಿಗೆಯಿಂದಾಗಿ ರಾಜ್ಯಾದ್ಯಂತ ಜಲಾಶಯಗಳಲ್ಲಿ ನೀರಿನ ಮಟ್ಟ ಅತ್ಯಂತ ವೇಗವಾಗಿ ಕುಸಿಯುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ(ಕೆಎಸ್‌ಎನ್‌ಡಿಎಂಸಿ)ದ ವರದಿಯ ಪ್ರಕಾರ, ಏಪ್ರಿಲ್ 29 ರ ಹೊತ್ತಿಗೆ, 13 ಜಲಾಶಯಗಳಲ್ಲಿ ನೀರಿನ ಮಟ್ಟ ಸರಾಸರಿ ಶೇ. 27 ರಷ್ಟು ಇದೆ.

ಜನವರಿ 1 ರಿಂದ ಮೇ 31, 2023 ರವರೆಗೆ 129 ಮಿಮೀ ಸಾಮಾನ್ಯ ಪೂರ್ವ ಮುಂಗಾರು ಮಳೆಯಾಗಬೇಕಿತ್ತು. ಆದರೆ ಈ ರಾಜ್ಯದಲ್ಲಿ ಕೇವಲ 39.7 ಮಿಮೀ ಮಳೆಯಾಗಿದೆ. ಅಲ್ಲದೆ, ಜನವರಿ 1 ರಿಂದ ಮೇ 1, 2023 ರವರೆಗೆ ರಾಜ್ಯದಲ್ಲಿ ಸಾಮಾನ್ಯ 48 ಮಿಮೀ ಮಳೆಗೆ ಹೋಲಿಸಿದರೆ ಕೇವಲ 40 ಮಿಮೀ ಮಳೆಯಾಗಿದೆ.

ತುಂಗಭದ್ರಾ ಜಲಾಶಯದಲ್ಲಿ ಸದ್ಯ ಶೇ.3ರಷ್ಟು ನೀರಿನ ಸಂಗ್ರಹವಿದೆ. ಈ ಜಲಾಶಯದಲ್ಲಿ 2.81 ಟಿಎಂಸಿ ನೀರು ಇದ್ದು, ಒಟ್ಟು ಸಂಗ್ರಹ ಸಾಮರ್ಥ್ಯ 105.79 ಟಿಎಂಸಿ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8.87 ಟಿಎಂಸಿ ನೀರು ಸಂಗ್ರಹವಾಗಿತ್ತು.

ವರದಿಯ ಪ್ರಕಾರ, ಪ್ರಸ್ತುತ ರಾಜ್ಯದ ಜಲಾಶಯಗಳ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಶೇ. 28 ರಷ್ಟಪ ಇದೆ.

‘ನೀರಿನ ಕೊರತೆ ತಪ್ಪಿಸಲು ರಾಜ್ಯಕ್ಕೆ ಮಳೆ ಬೇಕು’
ಜಲಾಶಯಗಳಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 90.41 ಟಿಎಂಸಿ ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ 83.55 ಟಿಎಂಸಿ ನೀರು ಸಂಗ್ರಹವಾಗಿದೆ.

ಕಾವೇರಿ ಜಲಾನಯನ ಜಲಾಶಯಗಳಲ್ಲಿ 40.74 ಟಿಎಂಸಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 57.32 ಟಿಎಂಸಿ ನೀರು ಇತ್ತು. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದ ವರ್ಷ 132.98 ಟಿಎಂಸಿ ಇತ್ತು. ಈ ವರ್ಷ 99.09 ಟಿಎಂಸಿ ಇದೆ.

SCROLL FOR NEXT