ರಾಜ್ಯ

ಮಣಿಪುರ ಹಿಂಸಾಚಾರ: ರಾಜ್ಯದ ಪ್ರಚಾರ ಕಾರ್ಯಕ್ರಮಗಳ ರದ್ದುಪಡಿಸಿ, ದೆಹಲಿಗೆ ತೆರಳಿದ ಅಮಿತ್ ಶಾ!

Manjula VN

ಬೆಂಗಳೂರು: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ಪ್ರಚಾರಗಳ ರದ್ದುಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿದ್ದಾರೆಂದು ತಿಳಿದುಬಂದಿದೆ.

ಏಪ್ರಿಲ್ 25ರಿಂದ ಅಮಿತ್ ಶಾ ಅವರು, ರಾಜ್ಯದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದು, ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಪ್ರಚಾರ ನಡೆಸಲು ಮುಂದಾಗಿದ್ದರು.

ಆದರೆ, ಮಣಿಪುರದಲ್ಲಿ ಹಿಂಸಾಚಾರ ತೀವ್ರಗೊಂಡಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿನ ಪ್ರಚಾರ ಕಾರ್ಯಕ್ರಮಗಳ ರದ್ದುಪಡಿಸಿ, ದೆಹಲಿಗೆ ತೆರಳಿದ್ದಾರೆಂದು ವರದಿಗಳು ತಿಳಿಸಿವೆ.

ಮೇಟಿ ಸಮುದಾಯದವರನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸಲು ಮಣಿಪುರ ರಾಜ್ಯ ಸರ್ಕಾರಕ್ಕೆ ಆದೇಶಿಸುವ ಹೈಕೋರ್ಟ್ ಆದೇಶದ ವಿರುದ್ಧ ಮಣಿಪುರ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದೆ.

ಏಪ್ರಿಲ್ 28 ರಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಚುರಾಚಂದ್‌ಪುರಕ್ಕೆ ಭೇಟಿ ನೀಡಿದ ದಿನದಂದು ಸಂರಕ್ಷಿತ ಮತ್ತು/ಅಥವಾ ಮೀಸಲು ಅರಣ್ಯಗಳು ಮತ್ತು ಗ್ರಾಮಗಳ ತೆರವು ಕುರಿತು ರಾಜ್ಯ ಸರ್ಕಾರದ ಸಮೀಕ್ಷೆಯನ್ನು ವಿರೋಧಿಸಿ ಮಣಿಪುರದ ಬುಡಕಟ್ಟು ಸಂಘಟನೆಗಳು 12 ಗಂಟೆಗಳ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದವು.

ಈಗ ಮಣಿಪುರದ ಹಲವಾರು ಜಿಲ್ಲೆಗಳಲ್ಲಿ ಘರ್ಷಣೆಗಳ ಮಧ್ಯೆ, ರಾಜಧಾನಿ ಇಂಫಾಲ ಮತ್ತು ಹಿಂಸಾಚಾರ ಪೀಡಿತ ಚುರಾಚಂದ್‌ಪುರದಲ್ಲಿ ಸಹಜ ಸ್ಥಿತಿಗೆ ಮರಳಲು ಪ್ರಯತ್ನಗಳು ನಡೆಯುತ್ತಿರುವಾಗ ಮೋರೆ ಮತ್ತು ಕಾಂಗ್‌ಪೋಕ್ಪಿಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಸೇನೆ ತಿಳಿಸಿದೆ.

ಕೇಂದ್ರವು ಮಣಿಪುರ ರಾಜ್ಯಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸುತ್ತಿದೆ. ಭಾರತೀಯ ವಾಯುಪಡೆಯು (ಐಎಎಫ್) ಅಸ್ಸಾಂನ ಗುವಾಹಟಿ ಮತ್ತು ತೇಜ್‌ಪುರದಿಂದ ಪಡೆಗಳನ್ನು ಏರ್‌ಲಿಫ್ಟ್ ಮಾಡುತ್ತದೆ. ಮಾಜಿ ಸಿಆರ್‌ಪಿಎಫ್ ಮುಖ್ಯಸ್ಥ ಕುಲದೀಪ್ ಸಿಂಗ್ ಅವರನ್ನು ಮಣಿಪುರದ ಭದ್ರತಾ ಸಲಹೆಗಾರರನ್ನಾಗಿ ನೇಮಿಸಲಾಗಿದೆ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಅಶುತೋಷ್ ಸಿನ್ಹಾ ಅವರು ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ಕಾರ್ಯಾಚರಣೆಗಳ ಮೇಲ್ವಿಚಾರಣೆಯ ಒಟ್ಟಾರೆ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ.

SCROLL FOR NEXT