ರಾಜ್ಯ

15 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ‘ಬಲರಾಮ’ ಅಸ್ವಸ್ಥ!

Manjula VN

ಮೈಸೂರು: ದಸರಾ ಜಂಬೂಸವಾರಿಯಲ್ಲಿ 15 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ ‘ಬಲರಾಮ’ ಆನೆ (67) ಅಸ್ವಸ್ಥಗೊಂಡಿದ್ದು, ಕಳೆದ 7 ದಿನಗಳಿಂದ ಆಹಾರ ತ್ಯಜಿಸಿರುವುದಾಗಿ ತಿಳಿದುಬಂದಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಭೀಮನಕಟ್ಟೆ ಆನೆ ಶಿಬಿರದಲ್ಲಿರುವ ಆನೆಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಇದೀಗ ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ.

ಕಳೆದ 7 ದಿನಗಳಿಂದ ಆನೆ ಆಹಾರ ಸೇವನೆಯನ್ನು ತ್ಯಜಿಸಿರುವ ಹಿನ್ನೆಲೆಯಲ್ಲಿ ಪಶುವೈದ್ಯರು ಹಾಗೂ ತಜ್ಞರ ತಂಡವು ಇದೀಗ ಆನೆಗೆ ಎಂಡೋಸ್ಕೋಪಿ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಆನೆಯ ಗಂಟಲಿನಲ್ಲಿ ಹುಣ್ಣಾಗಿರುವ ಕಾರಣ ಏನನ್ನೂ ನುಂಗಲು ಸಾಧ್ಯವಾಗದೆ, ಆಹಾರ ತ್ಯಜಿಸಿದೆ ಎಂದು ಹೇಳಲಾಗುತ್ತಿದೆ.

ಆಹಾರ ಸೇವನೆ ಮಾಡದ ಕಾರಣ ಆನೆ ನಿತ್ರಾಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪಶುವೈದ್ಯರು ಆನೆಗೆ ದ್ರವ ಪದಾರ್ಥಗಳನ್ನು ಸೇವನೆಗೆ ನೀಡುವಂತೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.

ಇದೀಗ ಆನೆಯನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಳಿಯ ಭೀಮನಕಟ್ಟೆಯಲ್ಲಿರುವ ವಿಶೇಷ ಆನೆ ಆರೋಗ್ಯ ಶಿಬಿರದಲ್ಲಿರಿಸಿ ನಿರಂತರ ನಿಗಾವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿರುವ ರಾಜಮನೆತನದ ಆನೆಯ ಎಂಡೋಸ್ಕೋಪಿಗೆ ತಗಲುವ ವೆಚ್ಚವನ್ನು ಭರಿಸಿದೆ ಎಂದು ವರದಿಗಳು ತಿಳಿಸಿವೆ.

ಆಹಾರ ತ್ಯಜಿಸಿದಾಕ್ಷಣ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುವುದಿಲ್ಲ. ಪರೀಕ್ಷೆಗಳ ಮೂಲಕ ನಿಖರ ಕಾರಣಗಳನ್ನು ತಿಳಿದುಕೊಳ್ಳಬೇಕಿದೆ. ತಿನ್ನಲು ಹಾಗೂ ಕುಡಿಯುವಂತೆ ಮಾಡಲು ಎಲ್ಲಾ ರೀತಿಯ ವಿಧಾನಗಳನ್ನು ಅನುಸರಿಸಿ ಪ್ರಯತ್ನ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೈಕೆ ಹಾಗೂ ಆಹಾರವನ್ನು ಸೂಕ್ತರೀತಿಯಲ್ಲಿ ನೀಡಿ, ಪಾಲನೆ ಮಾಡುವುದರಿಂದ ಕಾಡುಗಳಿಗಿಂತಲೂ ಶಿಬಿರಗಳಲ್ಲಿ ಆನೆಗಳು ಹೆಚ್ಚು ಕಾಲ ಬದುಕುಳಿಯುತ್ತವೆ. ಶಿಬಿರಗಳಲ್ಲಿ ಆನೆಗಳು 90 ವರ್ಷಗಳವರೆಗೂ ಬದುಕುಳಿಯುತ್ತವೆ. ಬಲರಾಮ ಅತ್ಯಂತ ಹಳೆಯ ದಸರಾ ಆನೆ. 15 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಹೊತ್ತಿದ್ದಾನೆ. ಇತ್ತೀಚೆಗಷ್ಟೇ ಅಭಿಮನ್ಯೂ ಅಂಬಾರಿಯನ್ನು ಹೊತ್ತಿದ್ದ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT