ರಾಜ್ಯ

ಕರ್ನಾಟಕ ಚುನಾವಣೆ: ಉದ್ಧಟತನ ತೋರಿದ ಮಹಿಳಾ ಇನ್ಸ್ ಪೆಕ್ಟರ್ ಅಮಾನತು; ಮದ್ಯಸೇವನೆ ಶಂಕೆ ಇಬ್ಬರಿಗೆ ವೈದ್ಯಕೀಯ ಪರೀಕ್ಷೆ!

Vishwanath S

ಬೆಂಗಳೂರು/ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು ಹೀಗಾಗಿ ಮತದಾನಕ್ಕೆ ಅಗತ್ಯವಾದ ವಿದ್ಯುನ್ಮಾನ ಮತಯಂತ್ರ(ಇವಿಎಂ) ಸೇರಿ ವಿವಿಧ ವಸ್ತುಗಳ ಜತೆಗೆ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗುತ್ತಿದೆ. 

ಮತಗಟ್ಟೆ ತರಬೇತಿ ನೀಡುವಾಗ ಉದ್ಧಟತನ ತೋರಿದ ಮಹಿಳಾ ಇನ್ಸ್‌ಪೆಕ್ಟರ್‌ ಭವ್ಯ ಎಂಬುವರನ್ನು ಅಮಾನತು ಮಾಡಲಾಗಿದೆ. ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತರಬೇತಿಗೆ ನಿಯೋಜನೆ ಮಾಡಲಾಗಿತ್ತು. ಈ ವೇಳೆ ತರಬೇತಿಗೆ ಹಾಜರಾಗದೆ ಪೇಪರ್ ಓದುತ್ತಾ ಕುಳಿತಿದ್ದ ಭವ್ಯರನ್ನು ನೋಡಲ್ ಅಧಿಕಾರಿ ಹಾಗೂ ಸೆಕ್ಟರ್ ಅಧಿಕಾರಿ ಪ್ರಶ್ನಿಸಿದರು. ಈ ವೇಳೆ ಉದ್ಧಟತನ ಮಾತುಗಳನ್ನು ಆಡಿದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಭವ್ಯ ಅವರನ್ನು ಅಮಾನತು ಮಾಡಲಾಗಿದೆ.

ನಾನು ಮಾಡುತ್ತಿರುವುದು ಸರಿ, ತರಬೇತಿ ಕೊಡುವುದು ನಿಮ್ಮ ಕೆಲಸ, ತರಬೇತಿ ಪಡೆಯುವುದು ಬಿಡುವುದು ನಮ್ಮಿಷ್ಟ. ನೀವ್ ಹೇಳಿದಂತೆ ಕೇಳುವುದಕ್ಕೆ ನಾನು ನಿಮ್ಮ ಡಿಪಾರ್ಟ್‌ಮೆಂಟ್ ಅಲ್ಲ. ಈ ತರಬೇತಿ ಉಪಯೋಗಕ್ಕಿಲ್ಲ. ಯಾರಿಗಾದರೂ ಹೇಳಿಕೊಳ್ಳಿ ಎಂದು ಮಹಿಳಾ ಇನ್ಸ್‌ಪೆಕ್ಟರ್‌ ಉದ್ಧಟತನ ಮೆರೆದಿದ್ದಾರೆ. ಹೀಗಾಗಿ ಅಧಿಕಾರಿಗಳು ಬಿಬಿಎಂಪಿ ಆಯುಕ್ತರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮಹಿಳಾ ಇನ್ಸ್‌ಪೆಕ್ಟರ್‌ ಭವ್ಯಾರನ್ನು ಜಿಲ್ಲಾ ಚುನಾವಣಾಧಿಕಾರಿ ಅಮಾನತು ಮಾಡಿದ್ದಾರೆ.

ಈ ಮಧ್ಯೆ ಶಿವಮೊಗ್ಗದಲ್ಲಿ ಸಿಬ್ಬಂದಿಗಳ ನಿಯೋಜನೆ ವೇಳೆ ಇಬ್ಬರು ಮದ್ಯ ಸೇವನೆ ಮಾಡಿರುವ ಶಂಕೆ ಮೇರೆಗೆ ಇಬ್ಬರು ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದ ಇಬ್ಬರು ಚುನಾವಣಾ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಇಬ್ಬರು ಸಿಬ್ಬಂದಿ ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಿದ್ದುದ್ದನ್ನು ಗಮನಿಸಿದ ಚುನಾವಣಾ ಅಧಿಕಾರಿಗಳು ಮದ್ಯ ಸೇವನೆ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅವರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ.

ಕೆ.ಆರ್‌.ಪೇಟೆಯಲ್ಲಿ ಕಳಪೆ ಆಹಾರದ ವಿರುದ್ಧ ಚುನಾವಣಾ ಸಿಬ್ಬಂದಿ ಆಕ್ರೋಶ
ಕಳಪೆ ಆಹಾರ ಪೂರೈಕೆ ಮಾಡಿದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕು ಚುನಾವಣಾಧಿಕಾರಿ ವಿರುದ್ಧ ಚುನಾವಣಾ ಸಿಬ್ಬಂದಿ ಆಕ್ರೋಶ ಹೊರಹಾಕಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ಅವರಿಗೆ ಸೂಕ್ತ ಊಟದ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ. ಮಂಡ್ಯದಲ್ಲಿ ಉತ್ತಮ ಜಿಲ್ಲಾಧಿಕಾರಿ ಇದ್ದಾರೆ. ಅವರು ಎಲ್ಲವನ್ನೂ ಸೂಕ್ತವಾಗಿ ನಿರ್ವಹಿಸುವಂತೆ ಹೇಳಿದ್ದಾರೆ. ಆದರೆ, ಇಲ್ಲಿನ ಅಧಿಕಾರಿಗಳು ಜಿಲ್ಲಾಧಿಕಾರಿ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

SCROLL FOR NEXT