ರಾಜ್ಯ

ರಾಜ್ಯ ವಿಧಾನಸಭೆ ಚುನಾವಣೆ 2023: ಮತದಾನದ ದಿನ ವಿಶೇಷ ರೈಲು, ಹೆಚ್ಚುವರಿ ಕೋಚ್ ಅಳವಡಿಕೆ!

Manjula VN

ಬೆಂಗಳೂರು: ರಾಜ್ಯದಲ್ಲಿ ಮೇ.10 ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ದಿನವಾದ ಬುಧವಾರ ವಿಶೇಷ ರೈಲು ಹಾಗೂ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರು-ಬೆಳಗಾವಿ, ಬೆಂಗಳೂರು-ಬೀದರ್, ಬೆಂಗಳೂರು (ಯಶವಂತಪುರ) -ಮುರುಡೇಶ್ವರಕ್ಕೆ ವಿಶೇಷ ರೈಲು ಸಂಚರಿಸಲಿವೆ.

ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಒಂದು ರೈಲು ಸಂಚರಿಸಲಿದೆ. ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮೇ 9ರಂದು 8.30ಕ್ಕೆ ಹೊರಡಲಿದ್ದು, ಮೇ 10ರಂದು ಬೆಳಗ್ಗೆ 8.20ಕ್ಕೆ ಬೆಳಗಾವಿ ತಲುಪಲಿದೆ. ಮೇ 10ರ ಸಂಜೆ 5.30ಕ್ಕೆ ಬೆಳಗಾವಿಯಿಂದ ಹೊರಡಲಿದ್ದು, ಮೇ 11ರ ಮುಂಜಾನೆ 5 ಗಂಟೆಗೆ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ತಲುಪಲಿದೆ.

ಯಶವಂತಪುರದಿಂದ ಮುರುಡೇಶ್ವರಕ್ಕೂ ವಿಶೇಷ ರೈಲು ಮೇ 9 ರಂದು ರಾತ್ರಿ 11.55ಕ್ಕೆ ಹೊರಡಲಿದ್ದು, ಮೇ 10ರಂದು ಮಧ್ಯಾಹ್ನ 12.55ಕ್ಕೆ ತಲುಪಲಿದೆ. ಅದೇ ದಿನ ಮಧ್ಯಾಹ್ನ 1.30ಕ್ಕೆ ಮುರುಡೇಶ್ವರದಿಂದ ಹೊರಡಲಿದ್ದು ಮರುದಿನ 4 ಗಂಟೆಗೆ ಯಶವಂತಪುರಕ್ಕೆ ಬರಲಿದೆ.

ಇನ್ನು ಬೀದರ್ ಗೆ ತಲುಪುವ ರೈಲು ಮೇ 9ರಂದು ಸಂಜೆ 5 ಗಂಟೆಗೆ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಮೆಜೆಸ್ಟಿಕ್) ನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 7.20ಕ್ಕೆ ಬೀದರ್ ತಲುಪಲಿದೆ. ಮೇ 10ರಂದು ರಾತ್ರಿ 8 ಗಂಟೆಗೆ ಬೀದರ್ ನಿಂದ ಹೊರಟು ಮರುದಿನ ಬೆಳಗ್ಗೆ 11 ಗಂಟೆಗೆ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬರಲಿದೆ.

ಈಗಾಗಲೇ ಸಂಚರಿಸುತ್ತಿರುವ ರೈಲುಗಳಿಗೆ ಕೂಡ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ. 17307/ 17308 ಬಾಗಲಕೋಟೆ, ಮೈಸೂರು, ಬಸವ ಎಕ್ಸ್​​ಪ್ರೆಸ್​​ಗೆ ಹಾಗೂ 16593/94 ಬೆಂಗಳೂರು ನಾಂದೇಡ್ ವಯಾ ರಾಯಚೂರು, ಯಾದಗಿರಿ ರೈಲಿಗಳಿಗೆ ತಲಾ ಒಂದು ಕೋಚ್ ಸೇರ್ಪಡೆ ಮಾಡಲಾಗುತ್ತದೆ.

ಬೆಂಗಳೂರು-ಕಾರವಾರ ಮಧ್ಯೆ ಸಂಚರಿಸುವ 16595/96 ಸಂಖ್ಯೆಯ ರೈಲಿಗೂ ಹೆಚ್ಚುವರಿ ಕೋಚ್ ಇರಲಿದೆ, 12079/80 ಬೆಂಗಳೂರು-ಹುಬ್ಬಳ್ಳಿ ಜನಶತಾಬ್ಧಿ ಎಕ್ಸ್​​ಪ್ರೆಸ್​ಗೆ ಎರಡು ಹೆಚ್ಚುವರಿ ಕೋಚ್​​ಗಳು ಇರಲಿವೆ ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT